ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯ: ಇಂಧನ ಸಚಿವ ಸುನೀಲ್ ಕುಮಾರ್
ಬೆಂಗಳೂರು: `ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯವಾಗಲಿವೆ’ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವ ವಿದ್ಯುತ್ ವಾಹನ ದಿನಾಚರಣೆ ಅಂಗವಾಗಿ ವಿದ್ಯುತ್ ಚಾಲಿತ ವಾಹನಗಳ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, `ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿ ಇರಲಿವೆ. ಅದು ಅನಿವಾರ್ಯವೂ ಹೌದು. ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಿದರು.
`ಬೆಂಗಳೂರು ನಗರದಲ್ಲಿ 136 ಕಡೆ ವಿದ್ಯುತ್ ರೀಚಾಜಿರ್ಂಗ್ ಸೆಂಟರ್ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ರೀಚಾಜಿರ್ಂಗ್ ಸೆಂಟರ್‍ಗಳನ್ನು ತೆರೆಯಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದ ಅವರು, ವಿದ್ಯುತ್ ಚಾಲಿತ ವಾಹನಗಳಿಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಯೋಜನೆಗಳನ್ನು ರೂಪಿಸಲಿವೆ ಎಂದರು.
ವಿದ್ಯುತ್ ವಾಹನಗಳ ಬಳಕೆಯಿಂದ ಪರಿಸರಕ್ಕೆ ಅನುಕೂಲವಾಗಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರದಗಳಲ್ಲಿ ರೀಚಾಜಿರ್ಂಗ್ ಸೆಂಟರ್ ಸ್ಥಾಪಿಸಲು ಹೆಚ್ಚು ಒತ್ತು ನೀಡಲಿದ್ದೇವೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ವಾಹನಗಳನ್ನು ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ನೆರವಾಗಬೇಕು ಎಂದು ವಿ.ಸುನೀಲ್ ಕುಮಾರ್ ಇದೇ ವೇಳೆ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ತೋಟಗಾರಿಕೆ ಸಚಿವ ಮುನಿರತ್ನ, `ವಿದ್ಯುತ್ ಚಾಲಿತ ವಾಹನಗಳಿಗೆ ರೀಚಾರ್ಜ್ ಸೆಂಟರ್ ಮಾಡುವ ವೇಳೆ ಅವುಗಳನ್ನು ಈಗ ಇರುವ ಪೆಟ್ರೋಲ್ ಬಂಕ್ ಬಳಿಯೇ ಮಾಡಬೇಕು. ಜತೆಗೆ, ವಿದ್ಯುತ್ ಚಾಲಿತ ವಾಹನಗಳ ಬೆಲೆ ಕಡಿಮೆ ಮಾಡಬೇಕು. ಪೆಟ್ರೋಲ್ ವಾಹನಗಳ ಬೆಲೆಗಿಂತ ಶೇ.40ರಷ್ಟು ಕಡಿಮೆ ದರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿರಬೇಕು. ಈ ಕುರಿತು ವಾಹನ ಕಂಪೆನಿಗಳಿಗೆ ಬೆಲೆ ಕಡಿಮೆ ಮಾಡಲು ಕೋರುತ್ತೇವೆ’ ಎಂದು ತಿಳಿಸಿದರು.
ಇಂಧನ ಬೆಲೆ ಇಳಿಕೆ: `ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ. ನಮ್ಮ ಶರೀರ ಹಾಗೂ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು. ಇದಕ್ಕೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಸಲಹೆ ಮಾಡಿದರು.