ತುಮಕೂರು- ಕೊರೊನಾ 3ನೇ ಅಲೆ ತಡೆಗಾಗಿ ಸರ್ಕಾರ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಈ ಅಲೆ ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂಬ ತಜ್ಞರ ವರದಿ ಆಧಾರದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲೂ ಪ್ರಾಯೋಗಿಕವಾಗಿ ಮಕ್ಕಳ ಆಸ್ಪತ್ರೆ ಸಜ್ಜುಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಈಗಾಗಲೇ ತಜ್ಞರ ಸಮಿತಿಯ ಡಾ. ದೇವಿಶೆಟ್ಟಿ ಅವರು 3ನೇ ಅಲೆ ಮಕ್ಕಳಿಗೆ ಬರಲಿದೆ ಎಂಬ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ಪ್ರಾಯೋಗಿಕವಾಗಿ ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳ ಪ್ರಾಯೋಗಿಕ ಆಸ್ಪತ್ರೆ ಸಿದ್ದಪಡಿಸಿ, ನಂತರ ಎಲ್ಲ ತಾಲ್ಲೂಕುಗಳಲ್ಲಿ ಅದೇ ಮಾದರಿಯಲ್ಲಿ ಆಸ್ಪತ್ರೆ ಸಜ್ಜುಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉಪನೋಂದಣಾಧಿಕಾರಿ ಕಚೇರಿ ಉದ್ಘಾಟನೆಗೆ ಆಗಮಿಸಿದ ಸಚಿವರು ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳೊಂದಿಗೆ ತಾಯಿ ಇರುವಂತೆಯೂ ವ್ಯವಸ್ಥೆ ಮಾಡಿ ಆಸ್ಪತ್ರೆ ಸಿದ್ದಗೊಳಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಆದಷ್ಟು ಬೇಗ ಈ ಕಾರ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಮಕ್ಕಳ ತಜ್ಞರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಮುಂದಿನ 10 ದಿನಗಳಲ್ಲಿ ಫಿಜಿಷಿಯನ್, ಮೂಳೆ ತಜ್ಞರು ಸೇರಿದಂತೆ ಎಂಬಿಬಿಎಸ್ ಮಾಡಿರುವ ಎಲ್ಲ ವೈದ್ಯರಿಗೆ ಮಕ್ಕಳಿಗೆ ಚಿಕಿತ್ಸೆ ನೀಡುವ ಕುರಿತು ಮಕ್ಕಳ ತಜ್ಞರಿಂದ 3 ದಿನಗಳ ಕಾಲ ತರಬೇತಿ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಸೂಚಿಸಿರುವುದಾಗಿ ಹೇಳಿದರು.
ರಾಜ್ಯ ಮುಂಚೂಣಿ
ಕೊರೊನಾ ಲಸಿಕೆ ನೀಡಿಕೆ ಮತ್ತು ಪರೀಕ್ಷೆ ಮಾಡುವಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.
ಕೋವಿಡ್ ಲಸಿಕೆ ಕೊರೊನಾ ಸೋಂಕು ತಡೆಗಾಗಿ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಈ ಲಸಿಕೆಯನ್ನು ಪಡೆದುಕೊಳ್ಳಬೇಕು. ಯಾರೂ ಸಹ ಲಸಿಕೆ ಪಡೆಯದೆ ನಿರ್ಲಕ್ಷ್ಯ ವಹಿಸಬಾರದು ಎಂದು ಮನವಿ ಮಾಡಿದರು.
ತುಮಕೂರು ಜಿಲ್ಲೆಯಲ್ಲಿ ಒಟ್ಟು 18 ವರ್ಷಕ್ಕಿಂತ ಮೇಲಟ್ಟವರು 22 ಲಕ್ಷ ಮಂದಿ ಇದ್ದಾರೆ. ಈಗಾಗಲೇ 8 ಲಕ್ಷ ಮಂದಿ ಲಸಿಕೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಉಳಿದವರಿಗೂ ಲಸಿಕೆ ಹಾಕುವ ಕಾರ್ಯ ಬಿರುಸಾಗಿ ಸಾಗಲಿದೆ ಎಂದರು.
ಈಗಾಗಲೇ ರಾಜ್ಯದ ಜನರ ಸಹಕಾರಿಂದ ಕೊರೊನಾ 2ನೇ ಅಲೆ ಇಳಿಮುಖವಾಗಿದೆ. ಇದರ ಬೆನ್ನಲ್ಲೆ 3ನೇ ಅಲೆಯ ಎಚ್ಚರಿಕೆಯನ್ನು ತಜ್ಞರು ನೀಡಿರುವುದರಿಂದ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಅವರು ಪುನರುಚ್ಚರಿಸಿದರು.
ಕೊರೊನಾ ಸೋಂಕು ನಮ್ಮನ್ನು ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಚೀನಾ ವೈರಸ್ ತುಂಬಾ ಕಾಡುತ್ತಿದೆ. ಇದು ತಾನಾಗಿಯೇ ಬಂದಿದ್ದರೆ ಹೋಗುತ್ತಿತ್ತೇನೋ, ಆದರೆ ಮಾನವ ನಿರ್ಮಿತ ವೈರಸ್ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಇದು ಪದೇ ಪದೇ ರೂಂಪಾತಗೊಳ್ಳುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್, ಮಂಜುಳ ಸತ್ಯನಾರಾಯಣ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.