ಆರೆಸ್ಸೆಸ್ ಹಿಂದುಗಳನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ಯುತ್ತಿದೆ ಎಂದ ಮಾಜಿ ಐಪಿಎಸ್ ಅಧಿಕಾರಿ ನಾಗೇಶ್ವರ ರಾವ್
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು”Pseudo Hindutuva Fraud” ಎಂದು ಬಣ್ಣಿಸುವ ಮೂಲಕ ಅದರ ಬಹಿಷ್ಕಾರಕ್ಕೆ ಕರೆ ನೀಡಿ ನಿವೃತ್ತ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ ರಾವ್ ವಿವಾದಕ್ಕೀಡಾಗಿದ್ದಾರೆ. 2019ರಲ್ಲಿ ಕೆಲ ಸಮಯ ಹಂಗಾಮಿ ಸಿಬಿಐ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದ ರಾವ್, ಮಂಗಳವಾರ ಸರಣಿ ಟ್ವೀಟ್ ಮಾಡಿ “ಆರೆಸ್ಸೆಸ್ ಮುಕ್ತ್ ಭಾರತ”ಕ್ಕಾಗಿ ಶ್ರಮಿಸುವಂತೆಯೂ ಹಿಂದುಗಳಿಗೆ ಕರೆ ನೀಡಿದ್ದಾರೆ.
“ಆರೆಸ್ಸೆಸ್ ಇಸ್ಲಾಂಗೆ ಧೈರ್ಯ ನೀಡುತ್ತಿದೆ ಹಾಗೂ ಹಿಂದುಗಳು ಮತ್ತು ಹಿಂದು ಧರ್ಮವನ್ನು ವಿನಾಶದ ಸುವರ್ಣ ಹಾದಿಯಲ್ಲಿ ಕೊಂಡೊಯ್ಯುತ್ತಿದೆ,” ಎಂದು ಅವರು ಬರೆದಿದ್ದಾರೆ.
“(ಆರೆಸ್ಸೆಸ್‍ನಲ್ಲಿ) ದುರ್ಬಲತೆಯ ಚಿಹ್ನೆಗಳು ಹಿಂಸೆಯನ್ನು ಇನ್ನಷ್ಟು ಹೆಚ್ಚಿಸಿ ತಮ್ಮ ಕೆಲಸ ಬೇಗ ಮುಗಿಸಲು ಪ್ರಚೋದನೆಯೆಂದೇ ಇಸ್ಲಾಂ ಈಗ ಅಂದುಕೊಂಡಿದೆ,” ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಹಿಂದುಗಳು ಮತ್ತು ಮುಸ್ಲಿಮರ ನಡುವೆ ತಪ್ಪು ಅಭಿಪ್ರಾಯ ಸೃಷ್ಟಿಸಿ ಅವರು ಹೊಡೆದಾಡುವಂತೆ ಬ್ರಿಟಿಷರು ಮಾಡಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸೋಮವಾರ ಮುಂಬೈಯಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಹೇಳಿರುವ ಹಿನ್ನೆಲೆಯಲ್ಲಿ ರಾವ್ ಅವರ ಟ್ವೀಟ್‍ಗಳು ಬಂದಿವೆ.