ವಿಶ್ವಕಪ್ ತಂಡಕ್ಕೆ ಧೋನಿ ಸಲಹೆಗಾರನಾಗಿ ನೇಮಕ ವಿರುದ್ಧ ಬಿಸಿಸಿಐಗೆ ದೂರು
ಹೊಸದಿಲ್ಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಸಲಹೆಗಾರನಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ನೇಮಕ ಮಾಡಿರುವ ವಿರುದ್ಧ ಲೋಧಾ ಸಮಿತಿಯ ಸುಧಾರಣೆಗಳ ಹಿತಾಸಕ್ತಿ ಸಂಘರ್ಷವನ್ನು ಉಲ್ಲೇಖಿಸಿ ದೂರೊಂದನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗುರುವಾರ ಸ್ವೀಕರಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಆಟಗಾರರು ಹಾಗೂ ಆಡಳಿತಗಾರರ ವಿರುದ್ಧ ಸರಣಿ ಹಿತಾಸಕ್ತಿ ದೂರುಗಳನ್ನು ಸಲ್ಲಿಸಿದ್ದ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಆಜೀವ ಸದಸ್ಯ ಸಂಜೀವ್ ಗುಪ್ತಾ ಇದೀಗ ಧೋನಿ ವಿರುದ್ಧವೂ ದೂರು ಸಲ್ಲಿಸಿದ್ದಾರೆ. ಧೋನಿಯ ನೇಮಕಾತಿಯು ಹಿತಾಸಕ್ತಿಯ ಸಂಘರ್ಷದ ಷರತ್ತಿನ ಉಲ್ಲಂಘನೆಯಾಗಿದೆ. ಷರತ್ತಿನ ಪ್ರಕಾರ ಒಬ್ಬ ವ್ಯಕ್ತಿ ಎರಡು ಹುದ್ದೆಗಳನ್ನು ಹೊಂದುವಂತಿಲ್ಲ ಎಂದು ಸುಪ್ರೀಂ ಕೌನ್ಸಿಲ್ ಸದಸ್ಯರಿಗೆ ಗುಪ್ತಾ ಪತ್ರವನ್ನು ಕಳುಹಿಸಿದ್ದಾರೆ.
ಧೋನಿ ಒಂದು ತಂಡದಲ್ಲಿ ಆಟಗಾರ ಹಾಗೂ ಇನ್ನೊಂದು ತಂಡದಲ್ಲಿ ಮಾರ್ಗದರ್ಶಕರಾಗಿದ್ದಾರೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ತಿಳಿದುಬಂದಿದೆ. ಧೋನಿ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ನ ನಾಯಕ ಕೂಡ ಆಗಿದ್ದಾರೆ.
“ಹೌದು, ಗುಪ್ತಾ ಅವರು ಸೌರವ್ (ಗಂಗೂಲಿ) ಹಾಗೂ ಜಯ (ಶಾ) ಸೇರಿದಂತೆ ಅತ್ಯುನ್ನತ ಕೌನ್ಸಿಲ್ ಸದಸ್ಯರಿಗೆ ಪತ್ರವನ್ನು ಕಳುಹಿಸಿದ್ದಾರೆ. ಅವರು ಬಿಸಿಸಿಐ ಸಂವಿಧಾನದ ಕಲಂ 38 (4) ಅನ್ನು ಉಲ್ಲೇಖಿಸಿದ್ದಾರೆ, ಇದು ಒಬ್ಬ ವ್ಯಕ್ತಿಯು ಎರಡು ಪ್ರತ್ಯೇಕ ಹುದ್ದೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಪರಿಣಾಮಗಳನ್ನು ಪರಿಶೀಲಿಸಲು ಕೌನ್ಸಿಲ್ ತನ್ನ ಕಾನೂನು ತಂಡವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.
ಬುಧವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಟ್ವೆಂಟಿ-20 ವಿಶ್ವಕಪ್ ಗೆ ಮಾರ್ಗದರ್ಶಕರಾಗಿ ಧೋನಿ ಅವರನ್ನು ನೇಮಿಸಿದ್ದರು.
ಧೋನಿ ಪ್ರಸ್ತುತ ತಮ್ಮ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿದ್ದಾರೆ. ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಲೀಗ್ ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.