ದಿಢೀರ್ ಚುನಾವಣೆ ಘೋಷಿಸಿ ಜನಪ್ರಿಯತೆ ಕಳೆದುಕೊಂಡ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ!
ಟೊರಂಟೋ: ದೇಶದಲ್ಲಿ ಯಶಸ್ವಿಯಾಗಿ ನಡೆದ ಕೋವಿಡ್ ಲಸಿಕಾ ಅಭಿಯಾನದಿಂದ ಪ್ರೇರಿತರಾಗಿ ಹಾಗೂ ತಮ್ಮ ಮುಖ್ಯ ಎದುರಾಳಿ, ಕನ್ಸರ್ವೇಟಿವ್ ನಾಯಕ ಎರಿನ್ ಒ’ಟೂಲೆ ಅವರು ಜನಪ್ರಿಯರಾಗಿಲ್ಲ ಅಥವಾ ಜನರಿಗೆ ಅವರ ಬಗ್ಗೆ ಸಾಕಷ್ಟು ಗೊತ್ತಿಲ್ಲ ಎಂದೇ ನಂಬಿಕೊಂಡು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಮತ್ತೆ ಅಧಿಕಾರಕ್ಕೆ ಬರಲು ಕಾತುರರಾಗಿ ಸೆಪ್ಟೆಂಬರ್ 20ರಂದು ದಿಢೀರ್ ಚುನಾವಣೆಯನ್ನು ಕಳೆದ ತಿಂಗಳು ಘೋಷಿಸಿದ್ದರು. ಆದರೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆಯೆನ್ನುವಾಗ ಅವರ ಜನಪ್ರಿಯತೆ ಕುಸಿಯುತ್ತಿರುವುದು ಅವರ ಗಮನಕ್ಕೇ ಬಂದಿದೆಯಲ್ಲದೆ ಚುನಾವಣೆ ನಡೆದಿದ್ದೇ ಆದಲ್ಲಿ ಅವರು ಸೋಲಬಹುದು ಅಥವಾ ಅಲ್ಪಮತದ ಸರಕಾರ ನಡೆಸುವಂತಾಗಬಹುದು ಎಂದೇ ಅಂದಾಜಿಸಲಾಗಿದೆ ಎಂದು ವರದಿಯಾಗಿದೆ.
ಅವರು ಮತದಾರರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸಮಸ್ಯೆಯೊಂದನ್ನು ಮುಂದಿಟ್ಟು ಅಧಿಕಾರ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಹಲವರು ಅಂದುಕೊಂಡಿದ್ದಾರೆ.
ಸಮೀಕ್ಷೆಯೊಂದರ ಪ್ರಕಾರ ಶೇ. 60ರಷ್ಟು ಕೆನಡಿಯನ್ನರಿಗೆ ಈಗ ಚುನಾವಣೆ ಬೇಕಿಲ್ಲ ಹಾಗೂ ಮತ್ತೆ ಲಿಬರಲ್ ಪಕ್ಷದವರು ಸಂಪೂರ್ಣ ಹಿಡಿತ ಸಾಧಿಸುವುದೂ ಬೇಕಿಲ್ಲ.