ಉಳ್ಳಾಲ : ನಟ ಸೋನು ಸೂದ್ ಫೌಂಡೇಶನ್‌ನಿಂದ ಆಕ್ಸಿಜನ್ ಘಟಕ ಕೊಡುಗೆ
ಮಂಗಳೂರು : ನಟ ಸೋನು ಸೂದ್ ಫೌಂಡೇಶನ್ ಕೊಡುಗೆಯಾಗಿ ನೀಡಿದ ಆಕ್ಸಿಜನ್ ಘಟಕವನ್ನು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಸ್ವೀಕರಿಸಲಾಯಿತು.
ಈ ವೇಳೆ ಮಾತನಾಡಿದ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ, ಸೋನು ಸೂದ್ ಫೌಂಡೇಶನ್ ದ.ಕ. ಜಿಲ್ಲೆಗೆ ಪ್ರಥಮವಾಗಿ ನೀಡಿದ ಯೋಜನೆಯಿಂದ ಜನರಿಗೆ ಪ್ರಯೋಜನಕಾರಿಯಾಗಿದೆ. ಇಲ್ಲಿ 30-40 ಸಿಲಿಂಡರ್ ಆಕ್ಸಿಜನ್ ಉತ್ಪಾದನೆಯಾಗಲಿದೆ. ಹಾಗಾಗಿ ಉಳ್ಳಾಲ ಭಾಗದ ಜನರಿಗೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಬೇರೆಡೆಯಿಂದ ತರುವ ಕೆಲಸವಿಲ್ಲ ಎಂದು ಹೇಳಿದರು.
ದ.ಕ. ಜಿಲ್ಲಾಡಳಿತ ಹಾಗೂ ಸೋನು ಸೂದ್ ಫೌಂಡೇಶನ್ 75-25ರ ಅನುದಾನ ವಿನಿಯೋಗಿಸಿಕೊಂಡು ಘಟಕವನ್ನು ಸ್ಥಾಪನೆ ಮಾಡುತ್ತಿದೆ. ಈ ಘಟಕಕ್ಕೆ ಜಿಲ್ಲಾಡಳಿತ 12.88 ಲಕ್ಷ ರೂ. ಹಾಗೂ ಸೋನು ಸೂದ್ ಫೌಂಡೇಶನ್ 46 ಲಕ್ಷ ರೂ. ವಿನಿಯೋಗಿಸಿದೆ. ಇದರ ಕಾರ್ಯ ಆರಂಭವಾಗಿದೆ. ಈ ಭಾಗದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಹೊರಗಿನಿಂದ ತರಬೇಕಿತ್ತು. ಮುಂದಿನ ದಿನಗಳಲ್ಲಿ ಇಲ್ಲಿಯೇ ಆಕ್ಸಿಜನ್ ಉತ್ಪಾದನೆಯಾಗಲಿದೆ. ಈ ಘಟಕವನ್ನು ಜಿಲ್ಲಾಡಳಿತದ ವತಿಯಿಂದ ಆರೋಗ್ಯ ಇಲಾಖೆ ನಿರ್ಮಾಣ ಮಾಡಲಿದೆ. ಜಿಲ್ಲಾಡಳಿತ ಪರವಾಗಿ ಸೋನು ಸೂದ್ ಅವರಿಗೆ ಧನ್ಯವಾದಗಳು” ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸೋನು ಸೂದ್ ಫೌಂಡೇಶನ್ ಸದಸ್ಯ ಶ್ರೀಪ್ರಸಾದ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಉಳ್ಳಾಲ ನಗರಸಭೆ ಕಮಿಷನರ್ ರಾಯಪ್ಪ, ಆರೋಗ್ಯ ಅಧಿಕಾರಿ ರವಿಕೃಷ್ಣ, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾ ಸಾಗರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.