ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿ
ಕಾಸರಗೋಡು, ಆ.19: ಅಫ್ಘಾನಿಸ್ತಾನದಲ್ಲಿ ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿಯೊಬ್ಬರು ಸಿಲುಕಿದ ಬಗ್ಗೆ ಮಾಹಿತಿ ಲಭಿಸಿದೆ. ಬೇಳ ಪೆರಿಯಡ್ಕದ ಥೆರೇಸಾ ಕ್ರಾಸ್ತಾ ಎಂಬವರು ಕಾಬೂಲಿನಲ್ಲಿದ್ದು ಊರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಬೂಲ್ ಸಮೀಪದ ಇಟಲಿ ಮೂಲದ ಮಕ್ಕಳ ಕಲಿಕಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಂಗಳವಾರ ಊರಿಗೆ ಮರಳಲು ತೀರ್ಮಾನಿಸಿದ್ದರು. ಆದರೆ ರವಿವಾರವೇ ತಾಲಿಬಾನ್ ದೇಶದ ಕೇಂದ್ರವನ್ನು ತನ್ನ ಸ್ವಾಧೀನಕ್ಕೆ ಪಡೆದ ಹಿನ್ನೆಲೆಯಲ್ಲಿ ಅವರಿಗೆ ಮರಳಲು ಸಾಧ್ಯವಾಗಿಲ್ಲ. ಸದ್ಯ ಸಿಸ್ಟರ್ ಸುರಕ್ಷಿತರಾಗಿದ್ದು, ಈ ಬಗ್ಗೆ ಮನೆಯವರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಥೆರೆಸಾ ಕ್ರಾಸ್ತಾ ಜೊತೆಗಿರುವ ಪಾಕಿಸ್ತಾನ ಮೂಲದ ಇನ್ನೋರ್ವ ಸಿಸ್ಟರ್ ಜೊತೆ ಇಟಲಿಗೆ ತೆರಳಿ ಅಲ್ಲಿಂದ ಭಾರತಕ್ಕೆ ಮರಳುವ ಯೋಚನೆ ಹೊಂದಿದ್ದರೂ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಅಫ್ಘಾನಿಸ್ತಾನ ದಲ್ಲಿರುವ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಹಿಂದೆ ದ.ಕ. ಜಿಲ್ಲೆಯ ನೆಲ್ಯಾಡಿಯ ಕಾನ್ವೆಂಟ್‌ನಲ್ಲಿ ಥೆರೆಸಾ ಕ್ರಾಸ್ತಾ ಸಿಸ್ಟರ್ ಆಗಿದ್ದರು. ಮಂಗಳೂರಿನ ಜೆಪ್ಪು ಪ್ರಶಾಂತ್ ನಿವಾಸ ಆಶ್ರಮದಲ್ಲಿ ವಿಕಲಚೇತನ ಮಕ್ಕಳ ಆರೈಕೆ ಮಾಡುತ್ತಿದ್ದರು. ಮಂಗಳೂರಿನ ಸಿಸ್ಟರ್ ಆಫ್ ಚಾರಿಟಿಯಲ್ಲಿದ್ದ ಥೆರೇಸಾ ಇಟಲಿಯ ಸೇವಾ ಸಂಸ್ಥೆ ಮೂಲಕ ಮೂರು ವರ್ಷಗಳ ಹಿಂದೆ ಕಾಬೂಲ್‌ಗೆ ತಲುಪಿದ್ದರು. ಸದ್ಯ ಸುರಕ್ಷಿತವಾಗಿರುವುದಾಗಿ ಸಿಸ್ಟರ್ ಥೆರೆಸಾ ಸಂದೇಶ ಕಳುಹಿಸಿದ್ದು, ಮನೆಮಂದಿಗೆ ಒಂದಿಷ್ಟು ನೆಮ್ಮದಿ ತಂದಿದೆ.