ಪಂಜಾಬ್: ಕೃಷಿ ಕಾಯ್ದೆ ವಿರೋಧಿಸಿ ಬಿಜೆಪಿಗೆ ರಾಜೀನಾಮೆ ನೀಡಿದ ಮಾಜಿ ಶಾಸಕ ಸುಖ್ಪಾಲ್ ಸಿಂಗ್
ಫಿರೋಝ್ ಪುರದಲ್ಲಿ ಎರಡು ಬಾರಿ ಬಿಜೆಪಿಯಿಂದ ಚುನಾವಣೆಗೆ ಸ್ಫರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಸುಖ್ಪಾಲ್ ಸಿಂಗ್ ನನ್ನೂ ರವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆಯಲ್ಲಿ ರೈತರು ಮೃತಪಟ್ಟಿರುವ ಕಾರಣವನ್ನು ನೀಡಿ ಅವರು ರಾಜೀನಾಮೆ ನೀಡಿದ್ದಾರೆ. ಫಿರೋಝ್ ಪುರದಿಂದ ಅವರು 2002 ಮತ್ತು 2007ರಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ 2021 ಮತ್ತು 2017ರಲ್ಲಿ ಅವರು ಪರಾಜಿತರಾಗಿದ್ದರು.
ಈ ಕುರಿತು ತಮ್ಮ ನಿವಾಸದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನನ್ನೂ, ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಹಲವಾರು ಮಂದಿ ರೈತರು ಮೃತಪಟ್ಟಿರುವುದು ನನಗೆ ಮತ್ತು ನನ್ನ ಬೆಂಬಲಿಗರಿಗೆ ಅಸಮಾಧಾನ ತಂದಿದೆ. 2022ರ ವಿಧಾನಸಭಾ ಚುನಾವಣೆಗೆ ಮುಂಚೆ ಏನಾದರೂ ನಿರ್ಧಾರ ಕೈಗೊಳ್ಳಬೇಕೆಂದು ನನ್ನ ಬೆಂಬಲಿಗರು ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.
ನನ್ನ ಬೆಂಬಲಿಗರು ಹೇಳುವುದನ್ನು ಮಾತ್ರ ನಾನು ಅನುಸರಿಸುತ್ತೇನೆ. ಶಿರೋಮಣಿ ಅಕಾಲಿ ದಳ ಸೇರ್ಪಡೆಗೊಳ್ಳುತ್ತಿಲ್ಲ. ನಾನು ಯಾವುದೇ ಪಕ್ಷಕ್ಕೂ ಹೋಗುತ್ತಿಲ್ಲ ಎಂದು ಅವರು ತಿಳಿಸಿದರು. ಈ ಸನ್ನಿವೇಶಗಳಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಜವಾಬ್ದಾರರು ಎಂದು ಅವರು ಹೇಳಿದರು. “ಪಂಜಾಬ್‌ನ ಉನ್ನತ ನಾಯಕತ್ವವು ಕೇಂದ್ರ ಹೈಕಮಾಂಡ್‌ಗೆ ಸರಿಯಾದ ಚಿತ್ರವನ್ನು ನೀಡಲಿಲ್ಲ. ಕೃಷಿ ಕಾನೂನುಗಳು ಜಾರಿಗೆ ಬಂದಾಗಿನಿಂದ, ಆ ಮಸೂದೆಗಳನ್ನು ವಿರೋಧಿಸಿದವರಲ್ಲಿ ನಾನು ಮೊದಲಿಗನಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.