ಕೋಟಾ ಶ್ರೀನಿವಾಸ ಪೂಜಾರಿಯವರಂತೆ ಲೋಕಾಯುಕ್ತ ತನಿಖೆಗೆ ಎದೆ ಕೊಡುವ ಧೈರ್ಯ ಯಾವ ರಾಜಕಾರಣಿಗಿದೆ ಹೇಳಿ..?
‘ಉಡುಪಿ- ತನ್ನ ಆದಾಯಕ್ಕಿಂತ ಒಂದು ರೂ. ಕೂಡ ಹೆಚ್ಚುವರಿ ಹಣ ನನ್ನ ಮನೆ ನಿರ್ಮಾಣಕ್ಕೆ ಖರ್ಚಾಗಿಲ್ಲ, ಹೆಚ್ಚಾಗಿದ್ದರೆ ನನ್ನ ವಿರುದ್ದ ಕ್ರಮ ಕೈಗೊಳ್ಳಿ’…ಹೀಗಂತ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತನ್ನ ವಿರುದ್ದವೇ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತಕ್ಕೆ ಎರಡು ಪುಟಗಳ ಅರ್ಥಪೂರ್ಣ ಪತ್ರ ಬರೆದಿದ್ದಾರೆ. ರಾಜಕಾರಣದ ಹೊಲಸಿನ ಮಧ್ಯೆ ತನ್ನ ಮೇಲೆ ಸುಖಾಸುಮ್ಮನೆ ಮೆತ್ತಿಕೊಂಡ ಸೋಶಿಯಲ್ ಮೀಡಿಯಾದ ಆರೋಪವೊಂದಕ್ಕೆ ಒಬ್ಬ ಜನಪ್ರತಿನಿಧಿಯಾಗಿ ಇಷ್ಟೊಂದು ಧೈರ್ಯವಾಗಿ ಎದೆ ಕೊಟ್ಟಿರೋದು ನಿಜಕ್ಕೂ ಮಾದರಿ ನಡೆ. ಉಡುಪಿಯ 13 ಸೆಂಟ್ಸ್ ಜಾಗದಲ್ಲಿ ಅರ್ಧ ಎದ್ದು ನಿಂತ ಮನೆಯೊಂದು ಕಳೆದ ಕೆಲ ದಿನಗಳಿಂದ ಕರಾವಳಿಯಾದ್ಯಂತ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿತ್ತು.
ಕೋಟಾರ ಆರು ಕೋಟಿಯ ಮನೆ ಅನ್ನೋ ಟ್ಯಾಗ್ ಲೈನ್ ನಡಿ ಆ ಸೋಶಿಯಲ್ ಮೀಡಿಯಾ ಪೋಸ್ಟ್ ಸಭ್ಯ, ಶುದ್ದ ಹಸ್ತ ರಾಜಕಾರಣಿ ಅಂತ ಕರೆಯಲ್ಪಟ್ಟಿದ್ದ ಕೋಟಾ ಶ್ರೀನಿವಾಸ ಪೂಜಾರಿಯವರ ಪ್ರಾಮಾಣಿಕತೆಯ ಬಗ್ಗೆಯೇ ಬಹುದೊಡ್ಡ ಅನುಮಾನ ಹುಟ್ಟಿ ಹಾಕಿತ್ತು. ಆದರೆ ಕೋಟಾ ಮಾತ್ರ ಯಾರೂ ಊಹಿಸದ ರೀತಿಯಲ್ಲಿ ಆ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ.
ತನ್ನ ವಿರುದ್ದವೇ ತನಿಖೆ ನಡೆಸಿ ಅಂತ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ಹಾಗಾಗಿ ಕರ್ನಾಟಕ ಲೋಕಾಯುಕ್ತವೂ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕು, ಕೋಟಾರೇ ಹೇಳಿದಂತೆ ಅವರ ವಿರುದ್ದ ಅಗತ್ಯವಾಗಿ ತನಿಖೆ ನಡೆಸಬೇಕು, ಅವರ ಅದಾಯ, ಆರ್ಥಿಕ ಸ್ಥಿತಿಗತಿ, ಮನೆ, ಮಕ್ಕಳ ಹಣಕಾಸು ವ್ಯವಸ್ಥೆಗಳನ್ನ ಅಳೆದು ಅರು ಕೋಟಿ ಅಂತ ಕರೆಯಲ್ಪಟ್ಟ ಮನೆಯ(ಕೋಟಾರೇ ಹೇಳುವಂತೆ 60 ಲಕ್ಷದ ಮನೆ) ನಿರ್ಮಾಣಕ್ಕೆ ನಿಜವಾಗಿ ಖರ್ಚಾಗ್ತಿರೋದು ಎಷ್ಟು? ಅದರ ವೆಚ್ಚ ಕೋಟಾರ ಆದಾಯ ಮತ್ತು ಮಕ್ಕಳ ಆದಾಯವನ್ನು ಮೀರಿ ನಿಂತಿದ್ಯಾ ಅನ್ನೋದನ್ನ ಸಾಬೀತು ಪಡಿಸಬೇಕು. ಈ ಹೊತ್ತಿಗೆ ಇದು ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಎಷ್ಟು ಅಗತ್ಯವೋ ಲೋಕಾಯುಕ್ತಕ್ಕೂ ಈ ತನಿಖೆ ಮತ್ತು ಅದರ ಜರೂರು ಬಹಳಷ್ಟಿದೆ. ಇರಲಿ, ಕೋಟಾರ ಪತ್ರ ಮತ್ತು ಲೋಕಾಯುಕ್ತ ತನಿಖೆ ಪಕ್ಕಕ್ಕಿರಲಿ. ಇಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರ ನಡೆಯ ಬಗ್ಗೆ ಚರ್ಚೆಯಾಗಬೇಕಿದೆ. ಈಗಿನ ಕಾಲದಲ್ಲಿ ತನ್ನ ವಿರುದ್ದ ತನಿಖೆ ನಡೆಸದಂತೆ ನ್ಯಾಯಾಲಯದ ಮೆಟ್ಟಿಲು ಹತ್ತೋರ ಮಧ್ಯೆ, ಎಫ್ ಐಆರ್ ಗಳನ್ನೇ ರದ್ದು ಮಾಡಿ ಅಂತ ಕೋರ್ಟ್ ಗೆ ಹೋಗೋರ ನಡುವೆ ತನ್ನ ವಿರುದ್ದವೇ ತನಿಖೆ ನಡೆಸಿ ಅಂತ ಧೈರ್ಯವಾಗಿ ಹೇಳೋಕೆ ಒಬ್ಬ ಪ್ರಾಮಾಣಿಕ ರಾಜಕಾರಣಿಯಿಂದ ಮಾತ್ರ ಸಾಧ್ಯ. ಇನ್ನು ಕೋಟಾರ ಮನೆಗೊಂದು ಕೋಟಿಯ ಬೆಲೆ ಕಟ್ಟಿ ಹರಿ ಬಿಟ್ಟವರು ಮತ್ತಷ್ಟು ಸವಾಲುಗಳನ್ನು ಸ್ವೀಕರಿಸಬೇಕಿದೆ. ನೀವು ಮಾಡಿದ ಈ ಕಾರ್ಯದಿಂದ ರಾಜ್ಯದ ಮತ್ತಷ್ಟು ಕೋಟಿ ಬೆಲೆ ಬಾಳುವ ರಾಜಕಾರಣಿಗಳ ಬಂಡವಾಳ ಸೋಶಿಯಲ್ ಮೀಡಿಯಾದಲ್ಲಿ ಹರಾಜಿಗಿಡೋಕೆ ಸಮಯ ಬಂದಿದೆ. ಈ ಮೂಲಕ ಕೋಟಾ ಪೂಜಾರಿಯಷ್ಟೇ ಧೈರ್ಯವಾಗಿ ಈ ರಾಜಕಾರಣಿಗಳು ಲೋಕಾಯುಕ್ತ ತನಿಖೆಗೆ ಎದೆ ಕೊಡ್ತಾರಾ ಅನ್ನೋದನ್ನ ನೋಡಬೇಕು. ನಮ್ಮಲ್ಲಿ ಮತ್ತೆ ಮತ್ತೆ ಗೆದ್ದು ಬರೋ ಅನೇಕ ಶಾಸಕರು, ಸಂಸದರಿದ್ದಾರೆ. ಚುನಾವಣೆ ಹೊತ್ತಿಗೆ ಇವರೆಲ್ಲರೂ ತಮ್ಮ ಆದಾಯ, ಸಂಪಾದನೆ, ಅಸ್ತಿ ಅಂತೆಲ್ಲಾ ಸೇರಿಸಿ ಚುನಾವಣಾ ಆಯೋಗಕ್ಕೊಂದು ಅಫಿಡವಿತ್ ಸಲ್ಲಿಸ್ತಾರೆ. ಪ್ರತೀ ಚುನಾವಣೆ ವೇಳೆ ಅವರುಗಳು ಸಲ್ಲಿಸಿದ ಎಲ್ಲಾ ಅಫಿದವಿತ್ ಪ್ರತಿಗಳು ಗೂಗಲ್ ತಡಕಾಡಿದ್ರೆ ಯಥವತ್ತಾಗಿ ಸಿಕ್ಕಿ ಬಿಡುತ್ತೆ. ಪ್ರತೀ ಚುನಾವಣೆ ಹೊತ್ತಿಗೆ ನಿಮ್ಮ ನಾಯಕರು ಸಲ್ಲಿಸುತ್ತಾ ಬಂದ ಎಲ್ಲಾ ಅಫಿದವಿತ್ ಪ್ರತಿಗಳಲ್ಲಿ ಆಸ್ತಿ ವಿವರಗಳನ್ನೊಮ್ಮೆ ಸರಿಯಾಗಿ ಗಮನಿಸಿ. ಪ್ರತೀ ಐದು ವರ್ಷಕ್ಕೊಮ್ಮೆ ಸಲ್ಲಿಸೋ ಆ ಆಸ್ತಿ ವಿವರಗಳಲ್ಲಿ ಕಂಡು ಬರೋ ಏರಿಕೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬಿಡಿ ಸಾಕು. ಅಲ್ಲಿ ಮನೆಯಷ್ಟೇ ಅಲ್ಲ, ಒಂದೇ ಅವಧಿಗೆ ಥಟ್ಟನೇ ಎದ್ದುನಿಂತಿರೋ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳು, ಖಾಲಿ ನಿವೇಶನಗಳು, ಕಾಲಿಟ್ಟ ಜಾಗದಲ್ಲೆಲ್ಲಾ ಖರೀದಿಸಿಟ್ಟ ಮನೆಗಳ ಲೆಕ್ಕವೇ ದಂಗು ಬಡಿಸಿ ಬಿಡುತ್ತೆ. ಹಾಗಂತ ಈ ಲೆಕ್ಕಾಚಾರ ಜಸ್ಟ್ ಒಂದು ಭಾಗವೂ ಆಗಿರಬಹುದು, ಈ ಲೆಕ್ಕಾಚಾರದ ಆಚೆಗೂ ಬೇನಾಮಿ ಮತ್ತಷ್ಟಿರಬಹುದು. ಮೊದಲ ಬಾರಿ ಚುನಾವಣೆಗೆ ನಿಂತಾಗ ಮತ್ತು ಸದ್ಯ ಅವರ ಆಸ್ತಿಯಲ್ಲಿ ಕಂಡು ಬರ್ತಿರೋ ವ್ಯತ್ಯಾಸಗಳೇ ಯಾರು ಪ್ರಾಮಾಣಿಕ ಅನ್ನೋದನ್ನ ಸಾರಿ ಸಾರಿ ಹೇಳುತ್ತೆ. ಒಮ್ಮೆ ಇಂಥವರ ಮನೆಯ ಫೋಟೋಗಳನ್ನ ಕ್ಲಿಕ್ಕಿಸಿ, ಅದಕ್ಕೊಂದು ಒಳ್ಳೆಯ ವ್ಯಾಲ್ಯೋಶೆನ್ ಮಾಡಿಸಿ ಸಾಮಾಜಿಕ ತಾಣಗಳಲ್ಲಿ ಹರಿ ಬಿಟ್ಟು ನೋಡಿ. ಆಗ ಅವರಲ್ಲಿ ಎಷ್ಟು ಮಂದಿ ಕೋಟಾ ಶ್ರೀನಿವಾಸ ಪೂಜಾರಿಯಷ್ಟು ಧೈರ್ಯವಾಗಿ ನನ್ನ ವಿರುದ್ದ ತನಿಖೆ ನಡೆಸಿ ಅನ್ನೋ ಎದೆಗಾರಿಕೆ ತೋರುತ್ತಾರೆ ನೋಡೋಣ. ಹಾಲಿಯಿಂದ ಹಿಡಿದು ಮಾಜಿಗಳವರೆಗೆ ಬಹುತೇಕರು ಕೂತು ತಿಂದರೂ ಕರಗದಷ್ಟು ಆಸ್ತಿಯನ್ನ ಪಕ್ಷಾತೀತವಾಗಿ ಗಳಿಸಿಕೊಂಡಿದ್ದಾರೆ. ಅಂಥವರು ಸಾಮಾಜಿಕ ತಾಣಗಳಲ್ಲಿ ಬಿಡಿ, ನೇರಾನೇರಾ ಆರೋಪ ಮಾಡಿದರೂ ತುಟಿಕ್ ಪಿಟಿಕ್ ಅನ್ನಲ್ಲ. ಇಂಥವರ ಮಧ್ಯೆ ಇನ್ನೂ ರಾಜಕಾರಣದಲ್ಲಿ ಮರ್ಯಾದೆ ಉಳಿಸಿಕೊಂಡಿರೋ ಕೋಟಾ ಶ್ರೀನಿವಾಸ ಪೂಜಾರಿ ಆದಾಯಕ್ಕಿಂತ ಒಂದು ರೂ. ಹೆಚ್ಚು ಖರ್ಚನ್ನ ಮನೆಗೆ ಮಾಡಿಲ್ಲ ಅಂತ ಎದೆ ಮುಟ್ಟಿ ಹೇಳ್ತಾರೆ ಅಂದ್ರೆ ಅದು ಆ ವ್ಯಕ್ತಿ ರಾಜಕಾರಣದಲ್ಲಿ ಗಳಿಸಿಕೊಂಡ ಶುದ್ದಹಸ್ತ ಅನ್ನೋ ಗೌರವವನ್ನ ಉಳಿಸಿಕೊಂಡ ಪ್ರಾಮಾಣಿಕತೆಯಲ್ಲದೇ ಮತ್ತೇನೂ ಅಲ್ಲ. 13 ಸೆಂಟ್ಸ್ ಜಾಗದಲ್ಲಿ ಕೋಟಾ ಕುಟುಂಬ ಕಟ್ಟುವ ಮನೆ ಎರಡು ವರ್ಷ ಕಳೆದರೂ ಪೂರ್ಣವಾಗಿಲ್ಲ. 30 ಲಕ್ಷ ಸಾಲದ ಜೊತೆಗೆ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಪರಿಷತ್ ಸದಸ್ಯನಾಗಿ, ಕ್ಯಾಬಿನೆಟ್ ದರ್ಜೆಯ ಸಚಿವನಾದ ವ್ಯಕ್ತಿಯೊಬ್ಬನಿಗೆ ಎರಡು ವರ್ಷವಾದರೂ ತನ್ನ ಮನೆಯನ್ನೇ ಕಟ್ಟಿಕೊಳ್ಳಲಾಗಿಲ್ಲ ಅಂದ ಮೇಲೆ ಇವರ ವಿರುದ್ದ ಲೋಕಾಯುಕ್ತ ತನಿಖೆ ನಡೆಯಲೇ ಬೇಕು. ಬಹುಶಃ ಸದ್ಯದ ರಾಜಕಾರಣದಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯ ಹೊರತು ಲೋಕಾಯುಕ್ತ ತನಿಖೆಗೆ ಅರ್ಹವಾದ ವ್ಯಕ್ತಿ ಮತ್ತೊಬ್ಬರಿಲ್ಲ ಬಿಡಿ..! ಯಾಕೆಂದರೆ ಎಲ್ಲರೂ ಕಮರ್ಷಿಯಲ್ ಕಾಂಪ್ಲೆಕ್ಸ್, ಖಾಲಿ ನಿವೇಶನ, ಗಲ್ಲಿಗೊಂದು ಮನೆ ಕಟ್ಟುತ್ತಿರೋ ಹೊತ್ತಲ್ಲಿ ಕೋಟಾ ಮಾತ್ರ ಇನ್ನೂ ತಂಗಲೊಂದು ಸೂರು ಕಟ್ಟುವುದರಲ್ಲೇ ಇದ್ದಾರೆ. ಹೀಗಾದರೂ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ತನಿಖೆಯ ಮೂಲಕ ಉತ್ತರ ಸಿಗಲಿ. ಪಕ್ಷಾತೀತವಾದ ಭ್ರಷ್ಟಾಚಾರದ ಕೆಸರಲ್ಲಿ ಎಲ್ಲಾ ಪಕ್ಷಗಳು ಸಮಾನವಾಗಿ ತಿಂದು ತೇಗುತ್ತಿದೆ. ಅಂಥವರಲ್ಲಿ ಒಂದಷ್ಟು ಜನ ಪಾರದರ್ಶಕ ಮತ್ತು ಪ್ರಾಮಾಣಿಕ ನಾಯಕರ ಸಾಲಲ್ಲಿ ನಿಂತು ತನಿಖೆಗೆ ಎದೆಯೊಡ್ಡುವ ಧೈರ್ಯ ಕೆಲವರಿಗಷ್ಟೇ ಸಾಧ್ಯ. ಕಾಂಗ್ರೆಸ್ ನ ಜನಾರ್ದನ ಪೂಜಾರಿ, ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ…. ಈ ಇಬ್ಬರಷ್ಟೇ ಅಲ್ಲ, ರಾಜ್ಯದ ಮಟ್ಟಿಗೆ ರಾಜಕೀಯದ ಹೊಲಸಲ್ಲಿ ಖಜಾನೆ ತುಂಬಿಸಿಕೊಳ್ಳದ ಮತ್ತಷ್ಟು ನಾಯಕರಿದ್ದಾರೆ. ಅಂಥವರಷ್ಟೇ ರಾಜಕಾರಣಕ್ಕೆ ಮಾದರಿಯೇ ಹೊರತು, ದೇಶ ಕಟ್ಟುವ ಬದಲು ನೋಟಿನ ಖಜಾನೆ ಕಟ್ಟುವವರಲ್ಲ….ಕೋಟಾ ಆದಾಯ ಮೀರಿ ಆಸ್ತಿ ಗಳಿಸಿದ್ದಾರಾ ಅನ್ನೋ ಬಗ್ಗೆ ಅಗತ್ಯವಾಗಿ ಅವರೇ ಹೇಳಿದಂತೆ ತನಿಖೆ ನಡೆಯಲೇ ಬೇಕು. ಜೊತೆಗೆ ರಾಜ್ಯದ ಎಲ್ಲಾ ನಾಯಕರ ಆಸ್ತಿಗಳ ಬಗ್ಗೆಯೂ ತನಿಖೆ ನಡೆಯಲಿ.