ವಯನಾಡಿನ ವೈತಿರಿ ಸಂಪೂರ್ಣ ಲಸಿಕೆ ನೀಡಿರುವ ಕೇರಳ ರಾಜ್ಯದ ಮೊದಲ ಪ್ರವಾಸಿ ತಾಣ

 

ವಯನಾಡಿನ ವೈತಿರಿ ಸಂಪೂರ್ಣ ಲಸಿಕೆ ನೀಡಿರುವ ಕೇರಳ ರಾಜ್ಯದ ಮೊದಲ ಪ್ರವಾಸಿ ತಾಣ ಕೇರಳ ಪ್ರವಾಸೋದ್ಯಮ ವಲಯದವರಿಗೆ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಚುರುಕು

ಬೆಂಗಳೂರು, : ಕೇರಳ ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಆರೋಗ್ಯಕರಗೊಳಿಸಲು ಮತ್ತು ಆತಿಥ್ಯಕ್ಕೆ ಸುಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರವಾಸಿ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಕರೋನಾ ಲಸಿಕೆ ನೀಡುವ ಕಾರ್ಯವನ್ನು ಕೇರಳ ಸರಕಾರ ಚುರುಕುಗೊಳಿಸಿದೆ. ವಯನಾಡು ಜಿಲ್ಲೆಯ ವೈತಿರಿ ಪ್ರವಾಸೋದ್ಯಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಅಲ್ಲಿನ ಎಲ್ಲಾ ನಾಗರೀಕರಿಗೂ ಲಸಿಕೆ ನೀಡಿದ ಮೊದಲ ಪ್ರವಾಸಿ ತಾಣವಾಗಿದೆ ಎಂದು *ಕೇರಳ ಪ್ರವಾಸೋದ್ಯಮ ಸಚಿವರಾದ ಶ್ರೀ ಪಿ ಎ ಮೊಹಮ್ಮದ್‌ ರಿಯಾಸ್‌ ತಿಳಿಸಿದ್ದಾರೆ*.

 

ರಾಜ್ಯಾದ್ಯಂತ ಪ್ರವಾಸೋದ್ಯಮ ಕೇಂದ್ರಗಳನ್ನು ಆರೋಗ್ಯಕರ ಮತ್ತು ಆತಿಥ್ಯಕ್ಕೆ ಸಜ್ಜುಗೊಳಿಸಲು ಅಭಿಯಾನ ಸಿದ್ಧಪಡಿಸಿರುವ ಬಗ್ಗೆ ಘೋಷಿಸಿದ ಅವರು, ಸಾಂಕ್ರಾಮಿಕ ರೋಗ ಕಡಿಮೆಯಾದಾಗ ಪ್ರವಾಸಿಗರನ್ನು ಸೆಳೆಯಲಿರುವ ಹಿನ್ನಲೆಯಲ್ಲಿ ಪ್ರವಾಸಿ ವಲಯಕ್ಕೆ ಸಂಬಂಧಿಸಿದ ಎಲ್ಲಾ ಜನರಿಗೂ ಪೂರ್ಣವಾಗಿ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಹಾಗೂ ಸಂಘದ ಬೆಂಬಲದೊಂದಿಗೆ ಈ ಅಭಿಯಾನ ಆಯೋಜಿಸಲಾಗಿದೆ. ಈ ತಿಂಗಳು ವೈತಿರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಲಸಿಕೆ ಅಭಿಯಾನದ ಮೂಲಕ ಒಟ್ಟು 5395 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ಪ್ರವಾಸೋದ್ಯಮ ತಾಣವಾದ ಹಚ್ಚಹರಿಸಿರಿನ ಬೆಟ್ಟಗಳಿಂದ ಕೂಡಿದ ಜಿಲ್ಲೆ ವೈತಿರಿ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದ್ದು, ವೈತಿರಿ ತಾಲೂಕು ಕೇಂದ್ರ ಅಸ್ಪತ್ರೆ ಹಾಗೂ ಸುಗಂಧಗಿರಿ ಪ್ರಾಥಮಿಕ ಅರೋಗ್ಯ ಕೇಂದ್ರಗಳ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಅಭಿಯಾನ ನಡೆಸಿದ್ದಾರೆ.

 

“ಸಾಂಕ್ರಾಮಿಕ ನಂತರದ ಹಂತದಲ್ಲಿ, ಪ್ರವಾಸಿಗರು ಸಮಯ ಕಳೆಯಲು ಸುರಕ್ಷಿತವಾದ ಮತ್ತು ಸೂಕ್ತವಾದ ಸ್ಥಳಗಳನ್ನು ಹುಡುಕುತ್ತಾರೆ. ರಾಜ್ಯಾದ್ಯಂತ ಎಲ್ಲಾ ಸ್ಥಳಗಳಲ್ಲಿ ಎಲ್ಲಾ ಜನರಿಗೆ ಕೋವಿಡ್ 19 ಲಸಿಕೆ ನೀಡುವುದನ್ನು ಅತ್ಯಂತ ಮುಖ್ಯ ಎಂದು ಸರ್ಕಾರ ಪರಿಗಣಿಸಿದೆ,” ಎಂದು ಶ್ರೀ ಮೊಹಮ್ಮದ್ ರಿಯಾಸ್ ಹೇಳಿದ್ದಾರೆ.

 

“ಪ್ರಾಕೃತಿಕ ಸೌಂದರ್ಯದ ತಾಣವಾದ ವಯನಾಡು ಅದ್ಭುತವಾದ ಪ್ರವಾಸೋದ್ಯಮ ತಾಣವಾಗಿದೆ. ನಾವು ಸಾಹಸ ಪ್ರವಾಸೋದ್ಯಮ ಸೇರಿದಂತೆ ರಜಾದಿನಗಳು ಮತ್ತು ಬಿಡುವಿನ ಸಮಯದ ಚಟುವಟಿಕೆಗಳ ಸಮೃದ್ಧ ಮಿಶ್ರಣಕ್ಕೆ ತಾಣಗಳನ್ನು ಅಭಿವೃದ್ಧಿಪಡಿಸುವ ಪ್ರಮುಖ ಯೋಜನೆ ಹೊಂದಿದ್ದೇವೆ” ಎಂದು ಮೊಹಮ್ಮದ್ ಹೇಳಿದ್ದಾರೆ.

 

“ಲಸಿಕೆ ಅಭಿಯಾನ ಧ್ಯೇಯವನ್ನು ಪೂರ್ಣಗೊಳಿಸುವ ದಿಕ್ಕಿನಲ್ಲಿ ಉತ್ತಮವಾಗಿ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯೊಂದಿಗೆ, ಉದ್ದಿಮೆ ಸಮಿತಿಗಳು ಮತ್ತು ಉದ್ಯೋಗಿ ವೇದಿಕೆಗಳು ಹಾಗೂ ಸ್ಥಳೀಯ ಸಮುದಾಯಗಳು ಇದರ ಯಶಸ್ಸಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ,” ಎಂದು *ಕೇರಳ ಸರ್ಕಾರದ, ಪ್ರವಾಸೋದ್ಯಮದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ ವೇಣು, ಐಎಎಸ್* ಹೇಳಿದ್ದಾರೆ.

 

ಈ ಅಭಿಯಾನದಲ್ಲಿ ಹೋಟೆಲ್, ರೆಸಾರ್ಟ್ ಗಳು ಮತ್ತು ಹೋಂಸ್ಟೇಗಳು, ಪ್ರವಾಸಿ ಮಾರ್ಗದರ್ಶಕರು, ಟ್ಯಾಕ್ಸಿ ಹಾಗೂ ಆಟೋರಿಕ್ಷಾ ಚಾಲಕರು ಮತ್ತು ಪ್ರವಾಸೋದ್ಯಮ ಕೇಂದ್ರಗಳ ವ್ಯಾಪಾರಿಗಳೂ ಸೇರಿದಂತೆ ಪ್ರವಾಸ ಮತ್ತು ಆತಿಥ್ಯ ಉದ್ದಿಮೆಗೆ ಸಂಬಂಧಿಸಿದ ಎಲ್ಲಾ ಸೇವಾದಾರರಿಗೂ ಲಸಿಕೆಯನ್ನು ನೀಡಲಾಗಿದೆ.

 

ಅಭಿಯಾನದಿಂದ ರಕ್ಷೆ ಪಡೆದ ಪ್ರಮುಖ ತಾಣಗಳು ಅಲಪ್ಪುಳ, ಮುನ್ನಾರ್, ಕೊಚ್ಚಿ ಕೋಟೆ, ಕುಮಾರಕೋಮ್, ಕೋವಲಂ ಮತ್ತು ವಾರ್ಕಲ ಸೇರಿದಂತೆ, ರಾಜ್ಯದ ಉದ್ದಗಲಕ್ಕೂ ಹರಡಿದೆ.

 

“ಈ ಅಭಿಯಾನ ಕೇರಳವನ್ನು ನಿಜಕ್ಕೂ ಸಾಂಕ್ರಾಮಿಕ ನಂತರದ ಹಂತದಲ್ಲಿ ಭೇಟಿ ನೀಡಲು ಅಪಾಯ ರಹಿತ ಸ್ಥಳವಾಗಿಸಲಿದೆ. ಪ್ರವಾಸಿಗರು ಭೇಟಿ ನೀಡಲು ಆಯ್ಕೆಮಾಡಲು ಆತ್ಮವಿಶ್ವಾಸ ಹೆಚ್ಚಿಸಲು, ಭವಿಷ್ಯದಲ್ಲಿ ಇದು ಪ್ರಮುಖ ಅಂಶವಾಗಲಿದೆ”, ಎಂದು *ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಶ್ರೀ ವಿ ಆರ್ ಕೃಷ್ಣ ತೇಜ, ಐಎಎಸ್ ಹೇಳಿದ್ದಾರೆ*.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version