ದಿವಂಗತ ಜಿ ಇಂದ್ರ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

 

ತುಮಕೂರು ನಗರದ ಪತ್ರಿಕಾ ಭವನದಲ್ಲಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗಷ್ಟೆ ನಿಧನರಾದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಉಪ ಸಂಪಾದಕರಾದ ಜಿ. ಇಂದ್ರಕುಮಾರ್ ರವರಿಗೆ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು‌.

 

ಜಿ. ಇಂದ್ರಕುಮಾರ್ ರವರು ಸಾಹಿತಿಯಾಗಿ, ಜನಪರ ಚಿಂತಕರಾಗಿ, ಜಿಲ್ಲಾ ವರದಿಗಾರರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

 

ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕರಾದ ಎಸ್. ನಾಗಣ್ಣ ಮಾತನಾಡಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ರಾಜ್ಯದಲ್ಲಿಯೇ ಅತ್ಯಂತ ಹಳೆಯ ದಿನಪತ್ರಿಕೆಯಾಗಿದ್ದು, ಜಿಲ್ಲೆಯಲ್ಲಿ ಇಂದ್ರಕುಮಾರ್ ರವರು ಪತ್ರಿಕೆಯ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ಉತ್ತಮವಾದ ಸಾಹಿತಿ ಸಂಘಟನಾಕಾರರಾಗಿದ್ದರು. ಯಾರ ಮುಲಾಜಿಗೂ ಒಳಗಾಗದ ನೇರ ಮಾತುಗಳು ಹಾಗೂ ಬರವಣಿಗೆಗೆ ಅವರು ಹೆಸರಾಗಿದ್ದರು. ಅವರ ಅಕಾಲಿಕ ನಿಧನ ಸಾಹಿತ್ಯ ಮತ್ತು ಪತ್ರಿಕಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು.

 

ಲೋಕ ಶಿಕ್ಷಣ ಟ್ರಸ್ಟ್ ನ ಕಾರ್ಯಕರ್ಶಿಗಳಾದ ಹರಿಚನ್ನಕೇಶವ ಮಾತನಾಡಿ ಇಂದ್ರಕುಮಾರ್ ರವರು ಪತ್ರಿಕೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ತಮ್ಮ ಕಾರ್ಯವನ್ನು ನಿರ್ವಹಿಸಿದ್ದರು ಎಂದು ತಿಳಿಸಿದರು.

 

ಇದೇ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರರಾದ ಮುರುಳೀಧರ ಹಾಲಪ್ಪ ಇಂದ್ರಕುಮಾರ್ ರವರ ಸಾಧನೆ ಜಿಲ್ಲೆಯಲ್ಲಿ ಮೈಲುಗಲ್ಲು. ಪತ್ರಿಕಾ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರವಾಗಿದ್ದಾರೆ. ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಕೇವಲ ಪತ್ರಕರ್ತರಾಗಿ ಮಾತ್ರವಲ್ಲ ಸಾಹಿತಿಗಳಾಗಿದ್ದರು ಎಂದು ತಿಳಿಸಿ ಸರ್ಕಾರ ಪತ್ರಕರ್ತರ ಜೀವನ ಭದ್ರತೆಗಾಗಿ ಯೋಜನೆಗಳನ್ನು ರೂಪಿಸಬಡೆಕೆಂದು ಆಗ್ರಹಿಸಿದರು.

 

ಸಂಯುಕ್ತ ಕರ್ನಾಟಕ ಸಹಕಾರ ಸಂಘದ ಅಧ್ಯಕ್ಷರಾದ ರವಿ ಅಮ್ಮೇಕರ್ ರವರು ಮಾತನಾಡಿ ಉತ್ತಮ ವ್ಯಕ್ತಿತ್ವದ ಕ್ರಿಯಾಶೀಲ ಸಹೃದಯಿಯಾದ ಇಂದ್ರಕುಮಾರ್ ರವರ ಅಕಾಲಿಕ ನಿಧನ ಎಲ್ಲರಿಗೂ ತೀವ್ರ ದುಃಖವನ್ನು ತಂದಿದೆ ಅವರ ನಿಧನದ ನೋವನ್ನು ಕುಟುಂಬಕ್ಕೆ ಭರಿಸುವ ಶಕ್ತಿಯನ್ಬು ದೇವರು ನೀಡಲೆಂದು ಪ್ರಾರ್ಥಿಸಿದರು.

 

ಈ ವೇಳೆ ಮಾತನಾಡಿದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್ ರವರು ಇಂದ್ರಕುಮಾರ್ ರವರು ಉತ್ತಮವಾದ ಜ್ಞಾನವಂತರಾಗಿದ್ದರು, ಪ್ರತಿಯೊಬ್ಬರ ಸಂವೇದನೆಗಳಿಗೆ ಅಕ್ಷರ ರೂಪವನ್ನು ನೀಡುತ್ತಿದ್ದ ವ್ಯಕ್ತಿ. ಮಿತಭಾಷಿಯಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸದಾ ಅಧ್ಯಯನಶೀಲರಾಗಿದ್ದರು. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಕಲಿತು ತಿಳಿದು ತಮ್ಮ ಬರವಣಿಗೆಯ ಮೂಲಕ ಪ್ರಸ್ತುತಪಡಿಸುತ್ತಿದ್ದರು‌. ನಿಜವಾಗಿಯೂ ಬುದ್ದಿಜೀವಿಯಾಗಿದ್ದ ಅವರು ಎಂದಿಗೂ ತನ್ನು ಸಮಾಜಕ್ಕೆ ಬುದ್ದಿಜೀವಿಯೆಂದು ತೋರ್ಪಡಿಸದೇ, ಸಾಮಾಜಿಕ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ಹದಿನೈದು ದಿನಗಳ ಹಿಂದೆ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಆದರೆ ಇಂದು ಅವರು ನೆನಪು ಮಾತ್ರ ಎಂದು ತಿಳಿಸಿದರು. ಇದೇ ವೇಳೆ ಇಂದಿನ ದಿನಮಾನದಲ್ಲಿ ಮಾಧ್ಯಮ ಜ್ಞಾನದ ಕಡೆ ಗಮನ ನೀಡದೆ ರಂಜನೆಯ ಕಡೆ ಗಮನ ನೀಡಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವುದುಶೋಚನೀಯ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version