ವಕ್ಫ್ ಆಸ್ತಿಗಳ ಒತ್ತುವರಿ ತೆರವಿನ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ವಕ್ಫ್ ಆಸ್ತಿಗಳ ಒತ್ತುವರಿ ತೆರವಿನ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸಲು ಹೊರಡಿಸಲಾಗಿರುವ ಆದೇಶದ ಜಾರಿಗೆ ಕೈಗೊಂಡ ಕ್ರಮಗಳ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

 

ವಕ್ಫ್ ಆಸ್ತಿ ದುರ್ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸಲ್ಲಿಸಿರುವ ವಿಶೇಷ ವರದಿ ಆಧರಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ದುರ್ಬಳಕೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮಾಜಿ ಸಚಿವ ಎಸ್. ಕೆ. ಕಾಂತ ಹಾಗೂ ನಗರದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

 

ಅರ್ಜಿದಾರ ಮುಹಮ್ಮದ್ ಆರೀಫ್ ಜಮೀಲ್ ಪರ ವಾದಿಸಿದ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು, ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಟ್ಟು ವಕ್ಫ್ ಮಂಡಳಿಗೆ ಸೇರಿದ 29 ಸಾವಿರಎಕರೆ ಜಮೀನು ಒತ್ತುವರಿ ಹಾಗೂ ದುರ್ಬಳಕೆಯಾಗಿದೆ. ಈ ಒತ್ತುವರಿ ತೆರವುಗೊಳಿಸಿ ವಕ್ಫ್ ಮಂಡಳಿಯ ವಶಕ್ಕೆ ನೀಡಲು ರಾಜ್ಯ ಸರಕಾರ 8 ವರ್ಷಗಳ ಹಿಂದೆಯೇ ಕಾರ್ಯಪಡೆ ರಚಿಸಿ ಆದೇಶಿಸಿತ್ತು. ಆದರೂ ಕಾರ್ಯಪಡೆಯು ಒತ್ತುವರಿ ತೆರವುಗೊಳಿಸಿಲ್ಲ ಎಂದು ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಪ್ರಮಾಣ ಸಲ್ಲಿಸಬೇಕು. ವಕ್ಫ್ ಆಸ್ತಿ ಒತ್ತುವರಿ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸಲ್ಲಿಸಿರುವ ವಿಶೇಷ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿರುವ ಬಗ್ಗೆ ನಿಲುವು ತಿಳಿಸಲು ಸರಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

 

ಅರ್ಜಿದಾರರ ಕೋರಿಕೆ: ಅಲ್ಪಸಂಖ್ಯಾತರ ಆಯೋಗ ಸಲ್ಲಿಸಿರುವ ವಿಶೇಷ ವರದಿಯಲ್ಲಿನ ಶಿಫಾರಸುಗಳನ್ನು ಸಮರ್ಪಕವಾಗಿ  ಗೊಳಿಸುವಂತೆ ರಾಜ್ಯ ಸರಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗೆ ನಿರ್ದೇಶಿಸಬೇಕು. ವರದಿಯಲ್ಲಿನ ಅಂಶಗಳನ್ನು ಆಧರಿಸಿ ಅಕ್ರಮಗಳು ಹಾಗೂ ಒತ್ತುವರಿಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು. ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ಮಾಡಬೇಕು. 2016ರಲ್ಲಿ ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ವರದಿ ಸೇರಿದಂತೆ ರಾಜ್ಯ ಸರಕಾರ ಮತ್ತು ಲೋಕಾಯುಕ್ತ ಬಳಿ ಇರುವ ಎಲ್ಲ ದಾಖಲೆಗಳನ್ನು ನ್ಯಾಯಾಲಯ ತರಿಸಿಕೊಂಡು ಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version