ರಾಹುಲ್ ಗಾಂಧಿ ಟ್ವಿಟರ್ ಖಾತೆ ಸ್ಥಗಿತಗೊಳಿಸಬೇಕು: ಬಿಜೆಪಿ
ಮಹೊಬಾ: ಹೊಸದಿಲ್ಲಿಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೀಡಾದ 9 ವರ್ಷದ ದಲಿತ ಬಾಲಕಿಯ ಕುಟುಂಬದೊಂದಿಗಿನ ಫೋಟೊ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಇಂತಹ ವಿಷಯಗಳನ್ನು ರಾಜಕೀಯ ಹಿತಾಸಕ್ತಿಗೆ ಬಳಿಸಿಕೊಳ್ಳಬಾರದು ಎಂದಿದ್ದಾರೆ.
ಫೋಟೊ ಪೋಸ್ಟ್ ಮಾಡುವ ಮುನ್ನ ಅವರ ಅನುಮತಿ ಪಡೆಯಲಾಗಿದೆ ಎಂಬ ಪ್ರತಿಪಾದನೆಯನ್ನು ಬಾಲಕಿಯ ಕುಟುಂಬ ನಿರಾಕರಿಸಿರುವುದರಿಂದ ರಾಹುಲ್ ಗಾಂಧಿ ಅವರ ಟ್ವಿಟರ್ ಅನ್ನು ಮತ್ತೊಮ್ಮೆ ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ‘‘ರಾಹುಲ್ ಗಾಂಧಿ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಹಾಗೂ ಅವರು ಸುಳ್ಳುಗಾರ. ಅವರ ರಾಜಕೀಯ ಖಾತೆಯನ್ನು ಸಾರ್ವಜನಿಕರ ಸ್ಥಗಿತಗೊಳಿಸಿದ್ದಾರೆ. ಈಗ ಟ್ವಿಟರ್ ಅವರ ಖಾತೆಯನ್ನು ಸ್ಥಗಿತಗೊಳಿಸಬೇಕು’’ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ಕೇರಳದ ಕೋಝಿಕ್ಕೋಡ್ ನ ಬಿಜೆಪಿ ಕಚೇರಿಯನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ನಡ್ಡಾ, ಕೇರಳದಲ್ಲಿ ರಾಹುಲ್ ಗಾಂಧಿ ಅವರ ರಾಜಕೀಯ ಪ್ರವಾಸೋದ್ಯಮ ನಡೆಯುತ್ತಿದೆ. ಅವರು (ರಾಹುಲ್) ಅಮೇಥಿಯಲ್ಲಿ ಸೋಲು ಕಂಡು ವಯನಾಡ್ಗೆ ಓಡಿ ಹೋದರು. ರಾಜ್ಯ ಬದಲಿಸುವುದರಿಂದ ಯಾರೊಬ್ಬರ ನಡವಳಿಕೆ, ಉದ್ದೇಶಗಳು ಹಾಗೂ ಜನರಿಗೆ ಸೇವೆ ಸಲ್ಲಿಸುವ ಸಮರ್ಪಣಾ ಭಾವದಲ್ಲಿ ಬದಲಾವಣೆ ಆಗುವುದಿಲ್ಲ ಎಂದರು.