ಬಡ ಪಯಣಿಗನ ಕಾರು ಅಂಬಾಸಿಡರ್

ಬಡ ಪಯಣಿಗನ ಕಾರು ಅಂಬಾಸಿಡರ್

ಹಲವು ವರ್ಷಗಳ ಹಿಂದೆ ರಾಜರಸ್ತೆಯಲ್ಲಿ ಯುವರಾಜನಂತೆ ಸಂಚರಿಸುತ್ತಿದ್ದ ರಸ್ತೆಯ ರಾಜ ಅಂಬಾಸಿಡರ್ ಕಾರು ಇಂದು ಬದಲಾದ ಪರಿಸ್ಥಿತಿಯಲ್ಲಿ ಕಣ್ಮರೆಯಾಗಿದೆ.ಅಲ್ಲೊಂದು ಇಲ್ಲೊಂದು ಹಿರಿಯ ಚಾಲಕರು ಉಳಿಸಿದ ಕಾರುಗಳಷ್ಟೇ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಸಿಗುತ್ತದೆ. *ರಸ್ತೆಗಳ ರಾಜ* ಬಿರುದಾಂಕಿತ ಅಂಬಾಸಿಡರ್ ಕಾರು ಇಂಗ್ಲೆಂಡ್ ಕಂಪನಿ ಹಿಂದುಸ್ತಾನ್ ಮೋಟಾರ್ಸ್ ನವರ ಅವಿಷ್ಕಾರದಿಂದ ತಯಾರಾಯಿತು. ಮೋರಿಸ್ ವಾಸ್ಬಡ್ ಇದರ ಸೀರಿಸ್ ಮಾದರಿಯನ್ನು ಬದಲಾವಣೆಗೊಳಿಸಿ ಅಂಬಾಸಿಡರ್ ಕಾರನ್ನು ಹಿಂದುಸ್ತಾನ್ ಮೋಟರ್ಸ್ ನವರು ಹೊಸ ರೂಪದಿಂದ ರಸ್ತೆ

ಗಿಳಿಸಿದರು.1958ರ ಇಸವಿಯಲ್ಲಿ ಆರಂಭಗೊಂಡ ಅಂಬಾಸಿಡರ್ ಕಾರು ಭರ್ಜರಿಯಾಗಿ ತನ್ನ ಕಾರುಭಾರನ್ನು ನಡೆಸಿ ಬದಲಾವಣೆಯ ಅಲೆ ಬೀಸಿ 2014ರ ವರೆಗೆ ರಸ್ತೆಯಲ್ಲಿ ರಾಜನಂತೆ ಸೇವೆಗೈದಿತು.

1958 ರಿಂದ 1966ರ ವರೆಗೆ ಟೂರಿಷ್ಟ್ ಕಾರಾಗಿ ಈ ಅಂಬಾಸಿಡರ್ ಕಾರು ಊರೂರು ಸುತ್ತುತಿತ್ತು. ಚಾಲಕ ಹೊರತುಪಡಿಸಿ 05 ಜನ ಕುಳಿತುಕೊಳ್ಳುವ ಪರವಾನಿಗೆ ಇತ್ತು. 1966ರ ನಂತರ ಸರ್ವಿಸ್ ಕಾರಾಗಿ ಪರಿವರ್ತನೆಗೊಂಡು ಮೊದಲ ಸರ್ವಿಸ್ ಅಂಬಾಸಿಡರ್ ಕಾರು ಮಂಗಳೂರಿನಿಂದ ಬಂಟ್ವಾಳದತ್ತ ಪಯಣ ಬೆಳೆಸಿತು. ಚಾಲಕ ಹೊರತುಪಡಿಸಿ 06 ಜನರಿಗೆ ಕುಳಿತು ಕೊಳ್ಳುವ ಅವಕಾಶದೊಂದಿಗೆ ಅಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಓರ್ವ ಪಯಣಿಗನಿಗೆ 1-50 ರೂಪಾಯಿ ದರವಿತ್ತು. ನಂತರ ಅಂಬಾಸಿಡರ್ ಕಾರು ವಿಸ್ತರಣೆಗೊಂಡು ಮಂಗಳೂರಿನಿಂದ ಬಿ.ಸಿ.ರೋಡು ಮೂಲಕ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಉಪ್ಪಿನಂಗಡಿ ಕಡೆ ತನ್ನ ಸರ್ವಿಸ್ ಪಯಣವನ್ನು ಆರಂಭಿಸಿತು. ನಂತರ 1968 ರಲ್ಲಿ ದ.ಕ. ಜಿಲ್ಲೆಯಾದ್ಯಂತ ಅಂಬಾಸಿಡರ್ ನ ವ್ಯಾಪ್ತಿ ವ್ಯಾಪಕವಾಗಿ ವಿಸ್ತರಿಸಿತು. ಈ ಸಂದರ್ಭದಲ್ಲಿ ಸರತಿಯಲ್ಲಿ ಹೊರಡುವ ಕಾರುಗಳಲ್ಲಿ 08 ಜನರನ್ನು ಹಾಕಲು ಪರವಾನಿಗೆ ಇತ್ತು. ಕೆಲವು ಚಾಲಕರು ಸರತಿ ತಪ್ಪಿಸಿ ಗೋಲ್ ಮಾಲ್ ಮೂಲಕ ದಾರಿ ಮದ್ಯೆ ಸಿಗುವ ಜನರನ್ನು ತುಂಬಿಸಿ ಒಂಚೂರ್ ಸೇರ್ಲೆ ಸೇರ್ಲೆ (ಸ್ವಲ್ಪ ಸೇರಿಕೊಳ್ಳಿ ಸೇರಿಕೊಳ್ಳಿ) ಎಂದು ಹೇಳಿ ಸರ್ವಿಸ್ ಮಾಡುತ್ತಿದ್ದರು. *ಅಂಬಾಸಿಡರ್ ಕಾರು ಚಾಲಕ ಮಾಲಕರ ಬದುಕು ಕಟ್ಟಲು ಜೀವನ ಸಾಗಿಸಲು ಉತ್ತಮ ದಾರಿಯಾಗಿತ್ತು.*

ಬಂಟ್ವಾಳ ತಾಲೂಕಿನ 84 ಗ್ರಾಮಗಳಿಂದ 600 ಕ್ಕೂ ಮಿಕ್ಕಿ ಕಾರುಗಳು ಬಂಟ್ವಾಳದ ಕೇಂದ್ರ ಸ್ಥಳ ಬಿ.ಸಿ.ರೋಡಿನಲ್ಲಿ ಸರತಿ ಸಾಲಲ್ಲಿ ನಿಂತು ಸರ್ವಿಸ್ ಹಾಗೂ ಬಾಡಿಗೆ ಗೊತ್ತುಪಡಿಸಿ ಪ್ರಯಾಣಿಸುತ್ತಿತ್ತು. ಕೆಲವು ಚಾಲಕರು ಗ್ರಾಮೀಣ ಪ್ರದೇಶದಿಂದ ಬರುವಾಗ ಕೖಷಿಕರ ಕೖಷಿ ಬೆಳೆಗಳನ್ನು ಪೇಟೆಗೆ ತಂದು ಮಾರಾಟ ಮಾಡಿ ಸಂಜೆ ವಾಪಾಸು ಮನೆಗೆ ಹೋಗುವಾಗ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು, ಕೖಷಿಗೆ ಬೇಕಾಗು ಸಾಮಗ್ರಿಗಳನ್ನು ಕೊಂಡಯ್ಯಲು ಈ ಕಾರು ಕೊಂಡಿಯಾಗಿತ್ತು. ಚಾಲಕನಿಗೂ ತುಸು ಲಾಭವಾಗುತ್ತಿತ್ತು.

2003 ರಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಬರುವವರೆಗೆ ಅಂಬಾಸಿಡರ್ ಕಾರಿದ್ದೆ ಸಾಮ್ರಾಜ್ಯ. ನಂತರ ಕ್ರಮೇಣ ಕಾರಿನ ಬೇಡಿಕೆ ಕಮ್ಮಿಯಾಗುತ್ತಾ ಹೋಯಿತು. ಅಂದು ಮದುವೆಯ ಸಂದರ್ಭದಲ್ಲಿ ಈ ಕಾರುಗಳಿಗೆ ತುಂಬಾ ಬೇಡಿಕೆ. ಮದುಮಗನ, ಮದುಮಗಳ ದಿಬ್ಬಣ ಹೋಗಲು ಬರಲು ಅಂಬಾಸಿಡರ್ ಕಾರಿದ್ದೇ ಗೌರವ. ಆ ದಿನ ಮಧುವಣಗಿತ್ತಿಯಂತೆ ಅಲಂಕಾರಗೊಂಡು ಅಂಬಾಸಿಡರ್ ಮೆರೆಯುತ್ತಿತ್ತು. ಆ ದಿನಗಳಲ್ಲಿ ಸಂಸಾರ ಪ್ರವಾಸ, ತೀರ್ಥ ಕ್ಷೇತ್ರದ ಯಾತ್ರೆಗೆ ಅಂಬಾಸಿಡರ್ ಕಾರೇ ಪ್ರಧಾನವಾಗಿತ್ತು. ರಕ್ಷಣೆಯ ವಾಹನವೂ ಆಗಿತ್ತು. ಉದ್ಯಮಿಗಳು, ಮಠಾಧೀಶರು, ಅಧಿಕಾರಿಗಳು, ಶಾಸಕ ಸಚಿವರೂ ಅಂಬಾಸಿಡರ್ ಕಾರಿನ ಅನುಭವ ಪಡೆದವರು. ಪತ್ರಿಕೆಗಳು ಕೇಂದ್ರ ಸ್ಥಳ ತಲುಪಲು ಈ ಕಾರು ಸೇವೆ ಸಲ್ಲಿಸುತಿತ್ತು.

ಅಂದಿನ ದಿನಗಳಲ್ಲಿ ಹಿಂದೆ ಮುಂದಿನ ಸೀಟುಗಳನ್ನು ಒಬ್ಬನೆ, ಸಂಸಾರ, ಗೆಳೆಯರು ಗೊತ್ತು ಪಡಿಸಿ ಸರ್ವಿಸ್ ಕಾರಲ್ಲಿ ಹೋದರೆ ಅದಕ್ಕೂ ದರ ನಿಗದಿಯಿತ್ತು. ಬದಲಾದ ಕಾಲ ಘಟ್ಟದಲ್ಲಿ ವಿಲಾಸಿ ಕಾರುಗಳು ಬಂದ ಮೇಲೆ ಅಂಬಾಸಿಡರ್ ಕಾರು ಮೂಲೆ ಗುಂಪಾಗುತ್ತ ಹೋಯಿತು. 2014 ರಲ್ಲಿ ಅಂಬಾಸಿಡರ್ ಕಾರು ತನ್ನ ಪಯಣವನ್ನು ನಿಲ್ಲಿಸಿತು.

ಅದೆಷ್ಟೋ ಹಿರಿಯ ಚಾಲಕರು ತನ್ನ ಬದುಕು ರೂಪಿಸಿದ, ಜೀವನ ಬದಲಾವಣೆ ಮಾಡಿದ ಅಂಬಾಸಿಡರ್ ಕಾರು ಇನ್ನು ನೆನಪು ಮಾತ್ರ. ಇದರೊಂದಿಗೆ ಅದರ ಸೇವೆ ಮಾಡಿದ ಪಿಟ್ಟರ್, ಪೈಂಟರ್, ಟಯರ್ ರಿಸೋಲ್ ಕೆಲಸಗಾರರು, ಬಿಡಿ ಸಾಮಾಗ್ರಿ ಮಾರಾಟಗಾರರು ತಮ್ಮ ವ್ಯವಹಾರವನ್ನೇ ನಿಲ್ಲಿಸಬೇಕಾಯಿತು. ವಿಲಾಸಿ ಕಾರುಗಳ ಯಾವುದೇ ದುರಸ್ತಿ ಅದೇ ಕಂಪನಿಯ ಮೂಲಕ ಯಾಂತ್ರಿಕವಾಗಿ ನಡೆಯುವಾಗ ಅಂಬಾಸಿಡರ್ ಕಾರಿನ ದುರಸ್ತಿಗಾರರು ಮರೆಯಾಗಿ ಹೋದರು. ಆದರೂ ಅಂದು ಬಡವರ ಪಯಣದ ರಾಯಭಾರಿ ಅಂಬಾಸಿಡರ್ ಕಾರು ಇಂದು ಎಲ್ಲಾದರೂ ಕಂಡಾಗ ಒಮ್ಮೆ ಸಂತಸದಿಂದ ನೋಡಬೇಕೆನಿಸುತ್ತದೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version