ಶಿಕ್ಷಕರ ಸಮಸ್ಯೆ ಬಗೆ ಬಗೆಹರಿಸಲು ಟೊಂಕ ಕಟ್ಟಿ ನಿಂತ ಶಿಕ್ಷಣ ತಜ್ಞ ಲೋಕೇಶ್ ತಾಳಿಕಟ್ಟೆ
ತುಮಕೂರು : ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಲೋಕೇಶ್ ತಾಳಿಕಟ್ಟೆ ರವರು ತುಮಕೂರು ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮುಂಬರುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮತ ಯಾಚನೆ ಮಾಡಿದರು, ತಮ್ಮ ನಂಬಿಕೆಗೆ ಅರ್ಹನಾಗಿ ನಾನು ಕೆಲಸ ಮಾಡಲು ಸಿದ್ಧನಾಗಿದ್ದೇನೆಂದು ವಾಗ್ದಾನ ಮಾಡಿ, ಶಿಕ್ಷಕರ ಸಮಸ್ಯೆಗಳಿಗೆ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆಂಬ ವಿಶ್ವಾಸವನ್ನು ಶಿಕ್ಷಕರಲ್ಲಿ ತುಂಬಿದರು.
ತುಮಕೂರಿನ ಶಾಲೆಯೊಂದಕ್ಕೆ ಭೇಟಿ ನೀಡಿ ಮಾತನಾಡುತ್ತಾ ಶಿಕ್ಷಕರ ನಡುವೆ ಸಮಾನತೆ ನಿರ್ಮಿಸಬೇಕಿರುವುದು ಸರ್ಕಾರದ ಕರ್ತವ್ಯವಾಗಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರ ನಡುವೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರೆಲ್ಲರೂ ಒಂದೇ, ಹಾಗೆಯೇ ಶಿಕ್ಷಣ ಪಡೆಯುತ್ತಿರುವ ಮಕ್ಕಳೂ ಸಹ ಒಂದೇ. ವೇತನ ಸ್ಥಾನಮಾನ ಹಾಗೂ ಇತರೇ ಸೌಲಭ್ಯಗಳನ್ನು ಶಿಕ್ಷಕರಿಗೆ ಸರ್ಕಾರ ನೀಡುವಲ್ಲಿ ತಾರತಮ್ಯ ಮಾಡಬಾರದು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜೊತೆಗೆ ದೇಶದ ಭವಿಷ್ಯವನ್ನೂ ನಿರ್ಮಾಣ ಮಾಡುವ ಅಮೂಲ್ಯ ಸಂಪನ್ಮೂಲವಾಗಿದ್ದಾರೆ. ಈ ಹಿನ್ಮೆಲೆಯಲ್ಲಿ ಸರ್ಕಾರ ಶಾಲೆಗಳು ಯಾವುದೇ ಇರಲಿ ಶಿಕ್ಷಕರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕೆಂದು ಅಭಿಪ್ರಾಯಪಟ್ಟರು.
ಮುಂದುವರೆದು ಮಾತನಾಡುತ್ತಾ ತಾವು ಶಿಕ್ಷಕರ ಸಮಸ್ಯೆಗಳನ್ನು ಸುದೀರ್ಘ ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದೇನೆ ಜೊತೆಗೆ ತಾನೂ ಸಹ ಶಿಕ್ಷಕನಾಗಿ ಪಟ್ಟ ಕಷ್ಟ ಮತ್ತೊಬ್ಬ ಶಿಕ್ಷಕರು ಪಡಬಾರದು ಎಂಬ ಧ್ಯೇಯದಿಂದಲೇ ನಾನು ಈ ಬಾರಿ ಚುನಾವಣೆಯ ಕಣಕ್ಕೆ ಇಳಿದಿದ್ದು, ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕಾಗಿದೆ, ಅದನ್ನು ನಾನು ಮಾಡಲು ಮುಂದೆ ಬಂದಿದ್ದು, ಶಿಕ್ಷಕರು ತನ್ನನ್ನು ಬೆಂಬಲಿಸಿ, ಆಶೀರ್ವದಿಸಿ ಕಳುಹಿಸಿದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆಂದು ತಿಳಿಸಿದರು.
ಇದೇ ಸಮಯದಲ್ಲಿ ಹಲವಾರು ಶಿಕ್ಷಕರು ಸೇರಿದಂತೆ, ಅಪಾರ ಬೆಂಬಲಿಗರು ಭಾಗಿಗಳಾಗಿದ್ದರು.