ಭೂಮಿ ಮತ್ತು ವಸತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದ _ಜಿಲ್ಲಾಧಿಕಾರಿಗಳು

ಭೂಮಿ ಮತ್ತು ವಸತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದ _ಜಿಲ್ಲಾಧಿಕಾರಿಗಳು

 

ತುಮಕೂರು : ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತುಮಕೂರು ಜಿಲ್ಲಾ ಘಟಕದ ಸಂಚಾಲಕರಾದ ಹಂದ್ರಾಳ್ ನಾಗಭೂಷಣ್ ಅವರ ನೇತೃತ್ವದಲ್ಲಿ ಭೂಮಿ ವಸತಿಗಾಗಿ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಮಾರ್ಚ್ 21 ರಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಇಂದು ಧರಣಿ ನಡೆಯುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭೇಟಿಯಾಗಿ ನೆನೆಗುದಿಗೆ ಬಿದ್ದಿರುವ ಭೂಮಿ ಮತ್ತು ವಸತಿ ಕಡತಗಳ ಪರಿಶೀಲನೆ ನಡೆಸಿ ಆಡಳಿತಾತ್ಮಕವಾಗಿ ಆಗಬೇಕಾದ ಎಲ್ಲಾ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಜಿಲ್ಲಾಡಳಿತವು ಮಾಡಿ ಕೊಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿ ಧರಣಿ ವಾಪಸ್ ಪಡೆಯುವಂತೆ ಮನವಿ ಮಾಡಿದರು.

ಇದಕ್ಕೆ ಒಪ್ಪದ ಮುಖಂಡರಾದ ಹಂದ್ರಾಳ್ ನಾಗಭೂಷಣ್ ಅವರು, ಈ ಹಿಂದೆ ಜಿಲ್ಲಾಧಿಕಾರಿಗಳು ನೀಡಿರುವ ಭೂಮಿಗೆ ಹಕ್ಕು ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳದ ಈ ಹಿಂದಿನ ಬ್ಯಾಲ್ಯ ಗ್ರಾಮ ಪಂಚಾಯ್ತಿಯ ಪಿಡಿಓ ಸಂತೋಷ್ ಸಿಂಗ್, ಹಾಲಿ ಪಿಡಿಓ ಮುದ್ದುರಾಜ್ ರವರನ್ನು ಕೂಡಲೇ ಅಮಾನತ್ತು ಗೊಳಿಸಬೇಕಾಗಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹಣ ದುರುಪಯೋಗ ಪಡಿಸಿಕೊಂಡಿರುವ ಸರ್ಕಾರಕ್ಕೆ ಮೋಸ ವಂಚನೆ ಮಾಡಿರುವ ಇದೇ ಬ್ಯಾಲ್ಯ ಗ್ರಾಮ ಪಂ. ಬಿಲ್ ಕಲೆಕ್ಟರ್ ನಾಗರಾಜು, ಲಕ್ಷ್ಮೀನಾರಾಯಣಪ್ಪ ಇವರುಗಳನ್ನು ಸೇವೆಯಿಂದ ವಜಾ ಮಾಡುವವರೆಗೂ, ಅ್ರಟಾಸಿಟಿ ಆರೋಪ ಹೊತ್ತಿರುವ ಚಿಕ್ಕನಾಯಕನಹಳ್ಳಿ ತಹಸಿಲ್ದಾರ್ ರವರನ್ನು ಅಮಾನತ್ತುಗೊಳಿಸಲು ಸರ್ಕಾರದ ಗಮನಕ್ಕೆ ತಂದು ಸ್ಥಳದಲ್ಲೇ ಅಮಾನತ್ತುಗೊಳಿಸುವವರೆಗೂ, ಹೆಬ್ಬೂರು ಪೊಲೀಸ್ ಠಾಣಾ ಜಾಗವನ್ನು ಪೊಲೀಸ್ ಇಲಾಖೆಗೆ ಇ-ಸ್ವತ್ತು ಮಾಡಿಸಿ ಕೊಡುವವರೆಗೂ ಮತ್ತು ಇತರೆ ಆಡಳಿತಾತ್ಮಕ ಬೇಡಿಕೆಗಳನ್ನು ಸ್ಥಳದಲ್ಲೇ ಬಗೆಹರಿಸುವವರೆಗೂ ಧರಣಿಯನ್ನು ಮುಂದುವರಿಸುವುದಾಗಿ ತಿಳಿಸಿದರು.

ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕೂಡ ಇಂದಿಗೂ ದೀನ ದುರ್ಬಲರು ತಮ್ಮ ಮೂಲಭೂತ ಹಕ್ಕಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸುತ್ತಿರುವುದು ಆಡಳಿತದ ವೈಫಲ್ಯಕ್ಕೆ ಕಾರಣವಾಗಿದೆ, ಇಂತಹ ಧರಣಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರದೃಷ್ಟಕರ ಎಂದು ಹೇಳಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಬೇಡಿಕೆಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.

 

ಮಾಜಿ ಶಾಸಕರು ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಭೂಮಿ ಮತ್ತು ವಸತಿ ವಂಚಿತರ ಬೇಡಿಕೆ ನ್ಯಾಯಯುತವಾದದು, ಜಿಲ್ಲಾಡಳಿತ ಇವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಾಲಮಿತಿಯೊಳಗೆ ಸಮಸ್ಯೆಗಳನ್ನು ಪರಿಹರಿಸಿ ಕೊಡಬೇಕೆಂದು ಒತ್ತಾಯಿಸಿದರು. ಆಮ್ ಆದ್ಮಿ ಪಕ್ಷ ಭೂಮಿ ಇಲ್ಲದವರ ಪರವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಚಿಂತಕರಾದ ಯತಿರಾಜ್, ಆಮ್ ಆದ್ಮಿ ಪಕ್ಷದ ಮುಖಂಡರಾದ ಡಾ.ವಿಶ್ವನಾಥ್, ಪ್ರಭುಸ್ವಾಮಿ, ಗೋವರ್ಧನ ರಾಜು, ಮಾರುತಿ.ಕೆ.ಆರ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ರಾಜ್ಯ ಸಂಚಾಲಕ ಕುಮಾರ್ ಸಮತಳ, ಲಂಚ ಮುಕ್ತ ವೇದಿಕೆಯ ಕಾರ್ತಿಕ್. ಎಂ, ಕುಮಾರಿ ಗಂಗಾರಾಣಿ, ಭದ್ರೇಗೌಡ, ಮಂಜುನಾಥ್, ಹಾಗು ನೊಂದ ಫಲಾನುಭವಿಗಳು ಭಾಗವಹಿಸಿ ದುರ್ಬಲರ ಮತ್ತು ಅಮಾಯಕರ ಜೀವನದ ನಡುವೆ ಸರ್ಕಾರದ ನೀತಿಗಳು ಮತ್ತು ಆಡಳಿತಗಳ ಬಗ್ಗೆ ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸಿದರು.

 

ಸ್ಥಳದಲ್ಲೇ ಸಮಸ್ಯೆಗಳು ಬಗೆಹರಿಯುವವರೆಗೂ ನಿರಂತರ ಅಹೋರಾತ್ರಿ ಧರಣಿಯನ್ನು ಮುಂದುವರಿಸುತ್ತಿರುವ ಧರಣಿ ನಿರತರ ಆರೋಗ್ಯದ ಮೇಲೆ ದುಷ್ಪರಿಣಾಮವಾದಲ್ಲಿ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಹಂದ್ರಾಳ್ ನಾಗಭೂಷಣ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿರುವುದರ ಜೊತೆಗೆ ಮುಂದುವರಿದ ಈ ನಮ್ಮ ಧರಣಿಯಲ್ಲಿ ಸಾಮಾಜಿಕ ಕಳಕಳಿ ಉಳ್ಳವರು ಭಾಗವಹಿಸಿ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version