ಇಬ್ಬರು ನಾಯಕರ ಸ್ವಾರ್ಥಕ್ಕೆ ಧರ್ಮಸಿಂಗ್ ಸರಕಾರ ಉರುಳಿತು : ವಾಟಾಳ್ ನಾಗರಾಜ್

ಇಬ್ಬರು ನಾಯಕರ ಸ್ವಾರ್ಥಕ್ಕೆ ಧರ್ಮಸಿಂಗ್ ಸರಕಾರ ಉರುಳಿತು : ವಾಟಾಳ್ ನಾಗರಾಜ್

ಬೆಂಗಳೂರು : ‘ಇಬ್ಬರು ನಾಯಕರು ತಮ್ಮ ಸ್ವಾರ್ಥಕ್ಕಾಗಿ ಪಿತೂರಿ ಮಾಡಿ ಧರ್ಮಸಿಂಗ್ ಸರಕಾರವನ್ನು ಉರುಳಿಸಿ, ಕರ್ನಾಟಕದ ರಾಜಕಾರಣಕ್ಕೆ ಬರಬಾರದ ರೋಗ ತಂದಿಟ್ಟರು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ.

 

ಶುಕ್ರವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಹಿರಿಯ ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಅವರ ರಾಜ್ಯ ರಾಜಕೀಯ ಬಗ್ಗೆ ಬರೆದ ‘ರಾಜಚರಿತೆ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

 

‘ಒಂದು ವೇಳೆ ಧರ್ಮಸಿಂಗ್ ಅವರು ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದರೆ, ಅವರ ಸರಕಾರವನ್ನು ಕೆಡವಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದ ವಾಟಾಳ್, ಧರ್ಮಸಿಂಗ್ ಅವರು ದುರ್ಬಲ ವರ್ಗಕ್ಕೆ ಸೇರಿದ ಕಾರಣ ಅವರ ನೇತೃತ್ವದ ಸರಕಾರ ಉರುಳಿಸಿದರು ಎಂದರು.

 

ರಾಜ್ಯ ರಾಜಕಾರಣದ ವಿಷಯದಲ್ಲಿ ರಾಜ ಚರಿತ್ರೆ ಕೃತಿ ಬಹಳ ಮಹತ್ವದ್ದು. ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಇಲ್ಲಿಯವರ ತನಕ ಒಂದೊಂದು ವಿಷಯಗಳು ವಿಠ್ಠಲ ಮೂರ್ತಿಯವರಿಗೆ ಕಂಠಪಾಠ. ನಿನ್ನೆ- ಮೊನ್ನೆ ನೋಡಿದ್ದೇನೋ ಎಂಬಂತೆ ಅವರು ಹೇಳುತ್ತಾರೆ. ರಾಜಚರಿತೆ ಕೃತಿಯನ್ನು ಬಿಡುಗಡೆ ಮಾಡಿದ್ದು ಖುಷಿ ತಂದಿದೆ.

 

ಕೆಂಗಲ್ ಹನುಮಂತಯ್ಯ ಅವರ ಸಂಪುಟ ಸತ್ಯ ಹರಿಶ್ಚಂದ್ರನ ಸಂಪುಟ ಎಂದರು. ಕೆಂಗಲ್ ಅವರ ಸಚಿವ ಸಂಪುಟದಲ್ಲಿ ಸಿದ್ದಲಿಂಗಯ್ಯ ಅವರ ಕುಟುಂಬದ ವಿರುದ್ಧ ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಇಂದು ದೊಡ್ಡ ಹಡಗನ್ನು ನುಂಗಿ ಜೀರ್ಣಿಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಒಂದು ಕಾಲದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಬೆಲೆ ಒಂದು ರೂಪಾಯಿ ಹೆಚ್ಚಾದರೆ ಜನ ಬೀದಿಗೆ ಬರುತ್ತಿದ್ದರು. ಆದರೆ ಇಂದು ಇಪ್ಪತ್ತೈದು, ಐವತ್ತು ರೂ. ಏರಿಕೆಯಾದರೂ ಜನ ಮಾತನಾಡುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

 

ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ, ಪ್ರಕಾಶಕ ರವಿಚಂದ್ರ ಹಾಗೂ ಕೃತಿಯ ಲೇಖಕರೂ ಆಗಿರುವ ಪತ್ರಕರ್ತ ವಿಠ್ಠಲ ಮೂರ್ತಿ ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version