ತುಮಕೂರು ವಿಶ್ವವಿದ್ಯಾನಿಲಯ ೧೫ನೇ ವಾರ್ಷಿಕ ಘಟಿಕೋತ್ಸವ: ೦೫-೦೭-೨೦೨೨  ಗೌರವ ಡಾಕ್ಟರೇಟ್ ಪುರಸ್ಕೃತರು.

ತುಮಕೂರು ವಿಶ್ವವಿದ್ಯಾನಿಲಯ ೧೫ನೇ ವಾರ್ಷಿಕ ಘಟಿಕೋತ್ಸವ: ೦೫-೦೭-೨೦೨೨  ಗೌರವ ಡಾಕ್ಟರೇಟ್ ಪುರಸ್ಕೃತರು.

ಶ್ರೀ ಪ್ರವೀಣ್ ಗೋಡ್ಖಿಂಡಿ (ಸಂಗೀತ ಕ್ಷೇತ್ರ)

 

ಶ್ರೀ ಪ್ರವೀಣ್ ಗೋಡ್ಖಿಂಡಿ ಕರ್ನಾಟಕದ ಪ್ರಸಿದ್ಧ ಕೊಳಲು ವಾದಕರು. ತಮ್ಮ ಮೂರನೇ ವರ್ಷದಲ್ಲೇ ಕೊಳಲು ಅಭ್ಯಾಸ ಆರಂಭಿಸಿದ ಇವರು ಆರನೇ ವರ್ಷಕ್ಕೇ ಸಾರ್ವಜನಿಕ ಪ್ರದರ್ಶನ ನೀಡಿದರು. ತಂದೆ ಪಂ. ವೆಂಕಟೇಶ ಗೋಡ್ಖಿಂಡಿಯವರೇ ಅವರ ಗುರುಗಳು. ಮೂಲತಃ ಧಾರವಾಡದವರಾದ ಪ್ರವೀಣ್ ಗೋಡ್ಖಿಂಡಿಯವರು, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಪದವೀಧರರು. ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾದ ಗೋಡ್ಖಿಂಡಿ, ಎಂಟು ಅಡಿ ಉದ್ದದ ಕೊಳಲನ್ನು ನುಡಿಸಿದ ಮೊದಲ ಭಾರತೀಯರು; ಅರ್ಜೆಂಟೀನಾದಲ್ಲಿ ನಡೆದ ವಿಶ್ವ ಕೊಳಲು ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸಿದವರಲ್ಲಿ ಮೊದಲಿಗರು; ’ಬೇರು’ ಹಾಗೂ ’ವಿಮುಕ್ತಿ’ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಉಸ್ತಾದ್ ಝಕೀರ್ ಹುಸೇನ್, ಡಾ. ಬಾಲಮುರಳಿಕೃಷ್ಣ, ಪಂ. ವಿಶ್ವಮೋಹನ್ ಭಟ್, ಡಾ. ಕದ್ರಿ ಗೋಪಾಲನಾಥ್, ಶಿವಮಣಿ ಮೊದಲಾದ ಪ್ರಸಿದ್ಧ ಕಲಾವಿದರೊಂದಿಗೆ ಪ್ರವೀಣ್ ಗೋಡ್ಖಿಂಡಿಯವರು ಕಾರ್ಯಕ್ರಮ ನೀಡಿದ ಹಿರಿಮೆ ಹೊಂದಿದ್ದಾರೆ. ಅಮೇರಿಕ, ಕೆನಡಾ, ಸ್ಪೇನ್, ಬೆಲ್ಜಿಯಂ, ಜರ್ಮನಿ, ಮಸ್ಕತ್, ಕತಾರ್, ಹೋಲೆಂಡ್, ಬ್ಯಾಂಕಾಕ್, ಸಿಂಗಾಪುರ, ದುಬೈ, ಪೋರ್ಚುಗಲ್ ಮೊದಲಾದೆಡೆ ಪ್ರವಾಸ ಮಾಡಿದ್ದಾರೆ. ಸುರಮಣಿ, ನಾದನಿಧಿ, ಸುರ್‌ಸಾಮ್ರಾಟ್, ಕಲಾಪ್ರವೀಣ, ಆರ್ಯಭಟ ಇತ್ಯಾದಿ ಬಿರುದುಗಳಿಂದ ಅವರು ಪುರಸ್ಕೃತರಾಗಿದ್ದಾರೆ.

 

ಡಾ. ರಾಮ್ ಶಂಕರ್ ಕುರೀಲ್ (ಕೃಷಿ ವಿಜ್ಞಾನ)

 

ಡಾ. ರಾಮ್ ಶಂಕರ್ ಕುರೀಲ್ ಅವರು ಪ್ರಸ್ತುತ ಛತ್ತೀಸ್‌ಗಡದ ಮಹಾತ್ಮ ಗಾಂಧಿ ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರ್ & ಫಾರೆಸ್ಟ್ರಿ ಡ್ರಗ್ ಇದರ ಕುಲಪತಿಗಳಾಗಿದ್ದಾರೆ. ೩೭ ವರ್ಷಗಳ ವೃತ್ತಿ ಅನುಭವ ಇರುವ ಅವರು ರಾಂಚಿಯ ಬಿರ್ಸಾ ಕೃಷಿ ವಿಶ್ವವಿದ್ಯಾನಿಲಯ, ಇಂದೋರ್‌ನ ಡಾ. ಬಿ. ಆರ್. ಅಂಬೇಡ್ಕರ್ ಸಮಾಜವಿಜ್ಞಾನಗಳ ವಿಶ್ವವಿದ್ಯಾನಿಲಯ, ಅಯೋಧ್ಯೆಯ ಆಚಾರ್ಯ ಎನ್ ಡಿ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ & ಟೆಕ್ನಾಲಜಿ ಇವುಗಳ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನೇಕ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಡಾ. ಕುರೀಲ್, ೧೫೦ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಸುಮಾರು ೨೦೦ ಸಂಶೋಧನ ಪ್ರಬಂಧಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದು, ೪೬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೂವತ್ತೆರಡಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ಡಾ. ಆರ್. ಎಸ್. ಕುರೀಲ್ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ.

 

ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ (ಸಮಾಜಸೇವೆ).

 

ಮೂಲತಃ ಮೇಲುಕೋಟೆಯವರಾದ ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ ಶ್ರೀ ಯದುಗಿರಿ ಯತಿರಾಜ ಮಠದ ಮುಖ್ಯಸ್ಥರಾಗಿದ್ದಾರೆ. ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪದವಿ ಪಡೆದ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ರಾಷ್ಟ್ರೋತ್ಥಾನ ಪ್ರಕಾಶನ ಸಂಸ್ಥೆಯ ಮೂಲಕ ’ಭಾರತ-ಭಾರತಿ’ ಸರಣಿಯಲ್ಲಿ ೫೫೦ ಶ್ರೇಷ್ಠ ಭಾರತೀಯರ ಕುರಿತು ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯ ನೇತೃತ್ವ ವಹಿಸಿದ್ದರು. ಇಸ್ಕಾನ್, ಶ್ರೀ ರಾಮಾನುಜ ಸೇವಾ ಟ್ರಸ್ಟ್ ಮೊದಲಾದ ಸ್ವಯಂಸೇವಾ ಸಂಸ್ಥೆಗಳ ಮೂಲಕ ಅನೇಕ ಗ್ರಾಮೀಣಾಭಿವೃದ್ಧಿ, ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಶ್ರೀ ರಾಮಾನುಜಾಚಾರ್ಯರು ಸ್ಥಾಪಿಸಿದ ಯದುಗಿರಿ ಯತಿರಾಜ ಮಠದ ನೇತೃತ್ವವನ್ನು ೨೦೧೪ರಲ್ಲಿ ವಹಿಸಿಕೊಂಡರು. ಶ್ರೀ ರಾಮಾನುಜಾಚಾರ್ಯರ ತತ್ವಗಳ ಪ್ರಸಾರಕ್ಕಾಗಿ ಭಾರತದಾದ್ಯಂತ ಎರಡೂವರೆಲಕ್ಷ ಕಿ.ಮೀ. ಪ್ರವಾಸ ಮಾಡಿದ್ದಾರೆ. ಅನೇಕ ಶಾಲೆಗಳನ್ನು ದತ್ತು ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುತ್ತಿದ್ದಾರೆ. ಗೋಶಾಲೆಗಳನ್ನು ಸ್ಥಾಪಿಸಿ ಭಾರತೀಯ ಗೋತಳಿಗಳ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version