ಧನಬಾದ್ ನ್ಯಾಯಾಧೀಶರ ಅನುಮಾನಾಸ್ಪದ ಸಾವು: ಹೈಕೋರ್ಟ್ ನಲ್ಲಿ ಸಿಬಿಐಗೆ ಮುಖಭಂಗ
ರಾಂಚಿ: ಮೊಬೈಲ್ ಕಸಿಯುವ ಪ್ರಯತ್ನದಲ್ಲಿ ಆಟೊರಿಕ್ಷಾ ಬಡಿದು ಧನಬಾದ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಮೃತಪಟ್ಟಿರಬೇಕು ಎಂಬ ಸಿಬಿಐ ಸಿದ್ಧಾಂತವನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಳ್ಳಿಹಾಕಿದೆ. ಇದುವರೆಗೆ ಈ ಸಂಬಂಧ ಆರೋಪಿಗಳ ಮಂಪರು ಪರೀಕ್ಷೆ ವರದಿ ಸೇರಿದಂತೆ ಎಲ್ಲ ಸಂಬಂಧಿತ ತಾಂತ್ರಿಕ ತನಿಖಾ ವರದಿಗಳನ್ನು ಸಲ್ಲಿಸುವಂತೆ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಾ.ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುರ್ಜೀತ್ ನಾರಾಯಣ ಪ್ರಸಾದ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ಬಗ್ಗೆ ವರ್ಚುವಲ್ ವಿಚಾರಣೆ ನಡೆಸುತ್ತಿದ್ದು, ಸಿಬಿಐನ ತನಿಖಾ ಪ್ರಗತಿ ವರದಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಘಟನೆ ನಡೆದ ವೇಳೆ ನ್ಯಾಯಾಧೀಶರ ಮೊಬೈಲ್ ಕದಿಯುವ ಪ್ರಯತ್ನದಲ್ಲಿದ್ದೆವು ಎಂದು ಇಬ್ಬರು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಸಿಬಿಐ ಹೇಳಿತ್ತು.
ಕಳೆದ ವರ್ಷದ ಜುಲೈ 28ರಂದು ಮುಂಜಾನೆ ವಾಯುವಿಹಾರ ಹೊರಟಿದ್ದ ಉತ್ತಮ್ ಆನಂದ್ ಅವರಿಗೆ ಆಟೊರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಯ ಭದ್ರತಾ ಆತಂಕಕ್ಕೆ ಕಾರಣವಾಗಿತ್ತು. ಧನಬಾದ್‌ನಿಂದ ಕಳ್ಳತನ ಮಾಡಿದ ಈ ವಾಹನವನ್ನು ಪಕ್ಕದ ಗಿರಿಧ್ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.
ಆಟೊ ಚಾಲಕ ಲಖನ್ ವರ್ಮಾ (22) ಮತ್ತು ಆತನ ಸಹಚರ ರಾಹುಲ್ ವರ್ಮಾ (21) ಎಂಬ ಇಬ್ಬರನ್ನು ಈ ಸಂಬಂಧ ಎರಡು ದಿನಗಳ ಬಳಿಕ ಬಂಧಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಸಿಬಿಐ ಈ ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ), 201 (ಸಾಕ್ಷಿ ನಾಶ) ಮತ್ತು 34 (ಸಮಾನ ಉದ್ದೇಶ) ಅನ್ವಯ ಆರೋಪಪಟ್ಟಿ ಸಲ್ಲಿಸಿತ್ತು.
ಘಟನೆ ನಡೆದ ಅವಧಿಯಲ್ಲಿ ಆಟೊದಲ್ಲಿ ಇದ್ದವರು ಮೊಬೈಲ್ ಕಸಿಯುವ ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವುದು ಸಿಸಿಟಿವಿ ದೃಶ್ಯಾವಳಿಯಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದ ನ್ಯಾಯಾಲಯ, ಸಿಬಿಐ ವಾದವನ್ನು ತಳ್ಳಿಹಾಕಿದೆ. ಇಂಥ ಪ್ರತಿಪಾದನೆ ಮೂಲಕ ಹತ್ಯೆಯ ತನಿಖೆಯನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವರ್ಚುವಲ್ ವಿಚಾರಣೆಯಲ್ಲಿ ಪಾಲ್ಗೊಂಡ ವಕೀಲರೊಬ್ಬರು ಹೇಳಿದ್ದಾರೆ.