ಪಾವಗಡ ಬಸ್ ದುರಂತ ಸಾರಿಗೆ ಇಲಾಖೆಯ ನಾಲ್ವರು ಅಧಿಕಾರಿಗಳ ಅಮಾನತು_ಸಚಿವ ಶ್ರೀ ರಾಮುಲು
ಬೆಂಗಳೂರು: ಪಾವಗಡ ತಾಲೂಕಿನಲ್ಲಿ ಸಂಭವಿಸಿದ ಖಾಸಗಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯಕ್ಕೆ ಕಾರಣವಾದ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಖಾಸಗಿ ಬಸ್ ಉರುಳಿ ಬಿದ್ದ ಪ್ರಕರಣ ಸೋಮವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ಮಾಡಿದ ಪ್ರಸ್ತಾಪಕ್ಕೆ ಉತ್ತರ ಕೊಟ್ಟ ಸಾರಿಗೆ ಸಚಿವ ಬಿ. ಶ್ರೀರಾಮುಲು, ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯತೆ ವಹಿಸಿದ ನಾಲ್ವರು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ಘಟನೆ ಸಂಭವಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಕ್ಕೆ ಹೋಗಬೇಕು ಎಂದು ಸೂಚನೆ ಕೊಟ್ಟರು. ಅದರಂತೆ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಪಾವಗಡ, ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರಿಗೆ ಇಲಾಖೆ ವತಿಯಿಂದ ತಲಾ ಐದು ಲಕ್ಷ ರೂ. ಪರಿಹಾರ ಹಾಗೂ ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಿದ್ದೇನೆ ಎಂದರು.
ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಲಾಗಿದ್ದು, ಎಲ್ಲರಿಗೂ ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಪಾವಗಡದಲ್ಲಿ 14 ಸರ್ಕಾರಿ ಬಸ್‌ಗಳೂ ಸೇರಿದಂತೆ 26 ಬಸ್‌ಗಳು ಸಂಚರಿಸುತ್ತವೆ. ಅಗತ್ಯ ಕಂಡು ಬಂದರೆ ಹೆಚ್ಚುವರಿ ಬಸ್ ಸೇವೆ ಒದಗಿಸಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.
ಚಾಲಕನ ನಿರ್ಲಕ್ಷ್ಯತೆಯೇ ಘಟನೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಬಸ್‌ಗಳ ಫಿಟ್ನೆಸ್ ಇಲ್ಲದೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಶ್ರೀರಾಮುಲು ಸ್ಪಷ್ಟನೆ ನೀಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ರಸ್ತೆಗಳ ರಾಷ್ಟ್ರೀಕರಣದ ನಂತರ ಉಂಟಾಗಿರುವ ಗೊಂದಲದಿಂದ ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಸಂಭವಿಸಿದ ದುರಂತ ಪದೇ ಪದೇ ಮರುಕಳಿಸುತ್ತಿವೆ. ಸರ್ಕಾರ ಇನ್ನಾದರೂ ಸೂಕ್ತ ಪರಿಹಾರೋಪಾಯ ಕಂಡು ಹಿಡಿಯದಿದ್ದರೆ, ಖಜಾನೆಯ ಹಣ ಪರಿಹಾರಕ್ಕೆ ಖಾಲಿಯಾಗುತ್ತದೆ ಎಂದು ಎಚ್ಚರಿಸಿದರು. ಪಾವಗಡದಲ್ಲಿ ಅರು ಮಂದಿಯನ್ನು ಬಲಿ ಪಡೆದ ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಕೃತ ಮಾರ್ಗಗಳಲ್ಲಿ ಖಾಸಗಿ ಬಸ್ ಗಳು ಓಡಾಡುವುದಿಲ್ಲ. ಸರ್ಕಾರಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇರಲ್ಲ. ಅನುಮತಿ ಇರುವ ಕೆಲವೇ ಬಸ್‌ಗಳು ಈ ರೀತಿ ಮಿತಿ ಮೀರಿ ತುಂಬಿಸಿಕೊಂಡು ಟಾಪ್ ಮೇಲೂ ಪ್ರಯಾಣಿಸಲೂ ಅವಕಾಶ ಕೊಡುತ್ತವೆ. ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಜೀವ ಹಾನಿ ಸಂಭವಿಸುತ್ತದೆ. ಜತೆಗೆ ಸರ್ಕಾರಿ ಸರ್ಕಾರಿ ವ್ಯವಸ್ಥೆಯಲ್ಲಿ ವಾಹನ ಸುರಕ್ಷತಾ ಪರವಾನಗಿ ನೀಡುವಾಗ ಮಾಡುತ್ತಿರುವ ಲೋಪಗಳು ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎಂದರು.
ಮಾಜಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮಾತನಾಡಿ, ಗಾಲಿಗಳನ್ನು ಸರಿಯಾಗಿ ಹೊಂದಿಸಿಕೊಳ್ಳದೇ (ವ್ಹೀಲ್ ಅಲೈನ್ಮೆಂಟ್ ) ಖಾಸಗಿ ಬಸ್ ಗಳು ಸಂಚರಿಸುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಟಾಪ್ ಮೇಲೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.