ಕೌಶಲ್ಯ ತರಬೇತಿಯಿಂದ ಯುವಜನರ ಏಳ್ಗೆ ಸಾಧ್ಯ : ಮುರಳೀಧರ ಹಾಲಪ್ಪ 

*ಕೌಶಲ್ಯ ತರಬೇತಿಯಿಂದ ಯುವಜನರ ಏಳ್ಗೆ ಸಾಧ್ಯ : ಮುರಳೀಧರ ಹಾಲಪ್ಪ* 

 

ಮಧುಗಿರಿ : ಮಿಡಿಗೇಶಿ ಹೋಬಳಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹು ವಿಧಧ ಕೌಶಲ್ಯ ತರಬೇತಿಗಳನ್ನು ಪಡೆಯುವ ಮೂಲಕ ಸಧೃಢ ಮಾನವ ಸಂಪನ್ಮೂಲ ಸೃಷ್ಟಿಯಾಗಲಿದೆ.

 

ವಿದ್ಯಾವಂತರು ಉದ್ಯೋಗಕ್ಕಾಗಿ ಅಲೆಯದೆ ಉದ್ಯೋಗ ಸೃಷ್ಟಿ ಮಾಡುವ ಕಡೆ ತಮ್ಮ ಚಿತ್ತ ಹರಿಸಬೇಕು, ತರಬೇತಿಯಿಲ್ಲದ ಯುವಜನರು ರೆಕ್ಕೆಯಿಲ್ಲದ ಹಕ್ಕಿಯಂತೆ, ಆದುದರಿಂದ ಯುವಜನರು ಬಹುವಿಧ ಕೌಶಲ್ಯಗಳನ್ನು ಕರಗತ ಮಾಡಿಕೊಂಡಲ್ಲಿ ಏಳ್ಗೆ ಸಾಧ್ಯ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವತಿಯಿಂದ ಎಂ.ಎಸ್.ವೈ.ಇ.ಪಿ ಯೋಜನೆಯಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಹುವಿಧ ಕೌಶಲ್ಯಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಲವಾರು ಕೌಶಲ್ಯಗಳ ಕೊರತೆಯನ್ನು ಎದುರಿಸುತ್ತಿದ್ದು, ಸ್ಪೋಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ, ಕಂಪ್ಯೂಟರ್ ಜ್ಞಾನವನ್ನು ಗಳಿಸುವ ಮೂಲಕ ಉತ್ತಮ ನೌಕರಿಗಳನ್ನು ಗಳಿಸಬಹುದು.

ಲಭ್ಯವಿರುವ ಸಂಪನ್ಮೂಲಗಳ ಬಳಸಿಕೊಂಡು ಉದ್ಯಮಿಗಳಾಗುವ ಅವಕಾಶಗಳೂ ಹೇರಳವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸುಲಭವಾಗಿ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ವಿದ್ಯಾಭ್ಯಾಸದ ಜೊತೆಜೊತೆಗೆ ಉದ್ಯೋಗಗಳಿಸುವ ಪೂರಕ ಕೌಶಲ್ಯಗಳನ್ನು ಕಲಿಯಬೇಕು. ಪ್ರಸ್ತುತ ಭಾರತವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೌಶಲ್ಯಯುಕ್ತ ಯುವ ಸಮುದಾಯದಿಂದ ಮಾತ್ರ ಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಳೆಯುವ ಬದಲು ಅಲ್ಲಿ ಸಿಗುವ ಯಶಸ್ವಿ ವ್ಯಕ್ತಿಗಳ ಸಂದೇಶಗಳನ್ನು ಮನನ ಮಾಡಿಕೊಳ್ಳುವ ಮೂಲಕ ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.

 

ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ದಿಲೀಪ್ ಕುಮಾರ್ ಮಾತನಾಡಿ ಬಹುವಿಧ ಕೌಶಲ್ಯಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿ ಮಿಡಿಗೇಶಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ 45 ದಿನಗಳ ಕಾಲ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪೋಕನ್ ಇಂಗ್ಲೀಷ್, ಜೀವನ ಕೌಶಲ್ಯ, ಕಂಪ್ಯೂಟರ್ ತರಬೇತಿಗಳನ್ನು ನೀಡಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು ಎಂದರು.

 

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆಯು ಸಾರ್ಥಕತೆ ಗಳಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಹಂಬಲ ಹೆಚ್ಚಿರಬೇಕು. ಪದವಿಯ ಜೊತೆಗೆ ಅನೇಕ ಕೌಶಲ್ಯಗಳನ್ನು ಕಲಿಯಲು ಆಸಕ್ತಿ ಹೊಂದಿದ್ದಲ್ಲಿ ಯಶಸ್ಸು ಸಾಧ್ಯ. ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಕೈಚೆಲ್ಲದೇ ಸದ್ಬಳಕೆ ಮಾಡಿಕೊಳ್ಳಬೇಕು. ಸಿಗುವ ಪ್ರತಿಯೊಂದು ಪ್ರೇರೇಪಣೆಯನ್ನು ಸಕಾರಾತ್ಮಕ ಮನೋಭಾವದಿಂದ ಸ್ವೀಕರಿಸಬೇಕು. ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಮ್ಮ ಭವಿಷ್ಯ ಅಡಗಿರುತ್ತದೆ. ಆದುದರಿಂದ ನಿರ್ಧಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಗತಕಾಲವನ್ನು ಶಪಿಸುವ ಬದಲು ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಲು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದರು

ವಿದ್ಯಾರ್ಥಿ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿ ಕೌಶಲ್ಯ ತರಬೇತಿ ಪಡೆಯುವಾಗಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು, ವಿದ್ಯಾಭ್ಯಾಸದ ನಂತರ ಕೌಶಲ್ಯ ಪಡೆಯುವ ಬದಲು, ವಿದ್ಯಾರ್ಥಿಯಾಗಿರುವಾಗಲೇ ಎಂ.ಎಸ್.ವೈ.ಇ.ಪಿ.ಯ ಬಹುವಿಧ ಕೌಶಲ್ಯಗಳನ್ನು ಕಲಿಯುವ ಮೂಲಕ ತಮ್ಮ ಜೀವನಕ್ಕೆ ಹೊಸ ತಿರುವನ್ನು ಪಡೆಯಬಹುದು.

 

ವ್ಯಕ್ತಿತ್ವ ವಿಕಸನ ಸಲಹೆಗಾರರಾದ ಶಿವಶಂಕರ್ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ನಿರ್ಧರಿಸಿ, ಕಠಿಣ ಪರಿಶ್ರಮ ವಹಿಸಿ, ಸಾಧನೆಯತ್ತ ಚಿತ್ತ ಹೊರಳಿಸಿ ಯಶಸ್ವಿ ವ್ಯಕ್ತಿಗಳಾಗಬಹುದು ಎಂದರು.

 

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಮಿಡಿಗೇಶಿ ಅಂಜನಪ್ಪ,ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಜಿಲ್ಲಾ ಕಾರ್ಯಕ್ರಮ ಆಯೋಜಕರಾದ ದೀಪಿಕಾ, ಜಯಶ್ರೀ, ವಿದ್ಯಾರ್ಥಿ ಧನಂಜಯ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version