ಕಲಾಪದಲ್ಲಿ ಚರ್ಚೆಗೆ ಆಡಳಿತ-ವಿಪಕ್ಷಗಳು ಅವಕಾಶ ನೀಡಿಲ್ಲ: ಮಾಜಿ ಪ್ರಧಾನಿ ದೇವೇಗೌಡ

ಕಲಾಪದಲ್ಲಿ ಚರ್ಚೆಗೆ ಆಡಳಿತ-ವಿಪಕ್ಷಗಳು ಅವಕಾಶ ನೀಡಿಲ್ಲ: ಮಾಜಿ ಪ್ರಧಾನಿ ದೇವೇಗೌಡ

ಹೊಸದಿಲ್ಲಿ, ಆ. 12: ಸಂಸತ್ ಕಲಾಪದಲ್ಲಿ ಮೂರು ಕೃಷಿ ಕಾನೂನುಗಳ ತಿದ್ದುಪಡಿ, ಪೆಟ್ರೋಲ್, ಡೀಸೆಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಓಬಿಸಿ ತಿದ್ದುಪಡಿ ಮಸೂದೆ, ಪೆಗಾಸಸ್ ಸೇರಿದಂತೆ ಯಾವುದೇ ವಿಷಯಗಳು ಚರ್ಚೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಚರ್ಚೆ ಮಾಡಲು ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷ ಅವಕಾಶ ಮಾಡಿಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದೂರಿದ್ದಾರೆ.

 

ಗುರುವಾರ ದಿಲ್ಲಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, `ಆಡಳಿತ ಮತ್ತು ವಿಪಕ್ಷಗಳ ಒಗ್ಗೂಡಿ ಕಲಾಪ ನಡೆಸಬೇಕು. ದೇಶದ ಜ್ವಲಂತ ಸಮಸ್ಯೆಗಳನ್ನು ಎಲ್ಲ ಪಕ್ಷಗಳ ನಾಯಕರು ಒಟ್ಟಿಗೆ ಸೇರಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಮುಂದಿನ ಅಧಿವೇಶನವನ್ನಾದರೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಇದೇ ವೇಳೆ ಸಲಹೆ ಮಾಡಿದರು.

 

ಮೆಚ್ಚುಗೆ: ಇದೇ ಮೊದಲ ಬಾರಿಗೆ 12 ಮಹಿಳೆಯರಿಗೆ, 8 ಎಸ್ಸಿ, 12 ಎಸ್ಟಿ ಸಮುದಾಯದ ನಾಯಕರಿಗೆ ಪ್ರಧಾನಿ ಮೋದಿ ಅವರು ತಮ್ಮ ಸಂಪುಟದಲ್ಲಿ ಅವಕಾಶ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೋ ಅಥವಾ ಚುನಾವಣೆ ತಂತ್ರವೋ ಗೊತ್ತಿಲ್ಲ. ಆದರೆ, ಅದು ಏನೇ ಇದ್ದರು ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನಾನು ಪ್ರಧಾನಿಯಾಗಿದ್ದಾಗಲು ಇಂತಹದ್ದೇ ಅವಕಾಶ ಸೃಷ್ಟಿಸಿದ್ದೆ’ ಎಂದು ಅವರು ಸ್ಮರಿಸಿದರು.

 

ಈ ಬಾರಿ ಅಧಿವೇಶದಲ್ಲಿ ನಾನು ಒಂದು ದಿನವೂ ಗೈರು ಆಗಿಲ್ಲ. ಎಲ್ಲ ದಿನದ ಕಲಾಪಗಳಲ್ಲಿ ಭಾಗಿಯಾಗಿದ್ದೇನೆ. ಶನಿವಾರ ರಜೆ ದಿನದಲ್ಲಿ ನಾನು ವಾರಣಾಸಿಗೆ ಹೋಗಿ ಬಂದೆ. ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಮಯ ಸಿಗಬಹದು ಎಂದುಕೊಂಡಿದ್ದೇನೆ. ಅವಕಾಶ ಸಿಕ್ಕರೆ ದೇಶದ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ’ ಎಂದು ಅವರು ತಿಳಿಸಿದರು.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿಯಾದ ನಂತರ ಶಾಸಕ ಪ್ರೀತಮ್ ಗೌಡ ಅಸಮಾಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, `ಅಷ್ಟು ಕೆಳಮಟ್ಟಕ್ಕೆ ನನನ್ನು ಇಳಿಸಬೇಡಿ. ನೀವು ಕೂಡ ಈ ಬಗ್ಗೆ ನನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಬೇಡಿ. ಈ ಬಗ್ಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಇದೇ ವೇಳೆ ನಿರಾಕರಿಸಿದರು.

ಬಿಜೆಪಿ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಮಾರ್ಗದರ್ಶನದಿಂದ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ. ಗೊಂದಲಗಳನ್ನು ನಿಭಾಯಿಸಲು ಸಿಎಂ ಬೊಮ್ಮಾಯಿ ಅವರು ಸಮರ್ಥರಿದ್ದಾರೆಂದು ಕೊಂಡಿದ್ದೇನೆ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಹಾಗೂ ನಾನು ಉತ್ತಮ ಗೆಳೆಯರು. ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ಮನೆಗೆ ಬಂದಿದ್ದರು. ನನ್ನಿಂದ ಸರಕಾರಕ್ಕೆ ಏನೂ ತೊಂದರೆ ಆಗುವುದಿಲ್ಲ ಎಂದಿದ್ದೇನೆ ಅಷ್ಟೇ. ರಾಜ್ಯದ ನೆಲ, ಜಲ, ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ. ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲದಕ್ಕೂ ಸಿದ್ಧ’ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version