ಇಂದಿರಾಗಾಂಧಿ ಕುರಿತು ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ಸಿಗರಿಗೆ ಕೋಪ: ಸಿ.ಟಿ.ರವಿ
ಬೆಂಗಳೂರು,: ದೇಶಭಕ್ತ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ಸಿಗರಿಗೆ ನಾನು ಇಂದಿರಾಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಭಾರೀ ಕೋಪ ಬಂದಿದೆ. ಒಂದು ಕುಟುಂಬದ ಓಲೈಕೆಯೇ ನಿಮ್ಮ ಸಂಸ್ಕøತಿಯೇ? ಇಂದಿರಾ ಕ್ಯಾಂಟೀನ್ ಬದಲು ನಾಡಿನ ಅನ್ನದ ದೇವತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಯಾಕಾಗಬಾರದು? ಇಲ್ಲಿನ ಮಣ್ಣಿನ ಮಗನ ಹೆಸರಿಡಬಹುದಿತ್ತಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ರಾಷ್ಟ್ರವಾದಿ ವೀರ್ ಸಾವರ್ಕರ್ ಅವರನ್ನು ನಿಂದಿಸುವ ಕಾಂಗ್ರೆಸ್ಸಿಗರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸರ್ವಾಧಿಕಾರಿಯನ್ನು ನಾಡಿನ ಅಧಿ ದೇವತೆಯಂತೆ ಪೂಜಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ನಿಜವಾಗಲೂ ಗರೀಬಿ ಹಟಾವೋ ಮಾಡಿದ್ದಿದ್ದರೆ “ಇಂದಿರಾ ಕ್ಯಾಂಟೀನ್” ಸ್ಥಾಪಿಸುವ ಅವಶ್ಯಕತೆ ಏನಿತ್ತು? ಕಾಂಗ್ರೆಸ್ಸಿಗರು ಉತ್ತರಿಸುವರೇ? ಎಂದು ಪ್ರಶ್ನಿಸಿದ್ದಾರೆ.
ತಮಗೆ ತಾವೇ ಭಾರತ ರತ್ನ ಕರುಣಿಸಿಕೊಂಡ ನೆಹರು ಮತ್ತು ಇಂದಿರಾ ಗಾಂಧಿ, ಡಾ.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಬದಲಾಗಿ ಅವರು ಬದುಕಿರುವವರೆಗೂ ಅವರನ್ನು ವಿರೋಧಿಸಿದರು. ಸಂವಿಧಾನ ಶಿಲ್ಪಿಯನ್ನು ವಿರೋಧಿಸಿದ ಕಾಂಗ್ರೆಸ್ ಸಂಸ್ಕೃತಿ ಜಗತ್ತಿಗೇ ತಿಳಿದಿದೆ. ಕಾಂಗ್ರೆಸ್ಸಿಗರು ಅಪಾತ್ರರ ಪೂಜೆ ಮಾಡಿಕೊಂಡಿರಲಿ ನಮ್ಮ ಅಭ್ಯಂತರವಿಲ್ಲ ಎಂದು ಅವರು ಟೀಕಿಸಿದ್ದಾರೆ.