ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದು: ಡಾ.ಹೆಚ್.ಸಿ ಮಹದೇವಪ್ಪ
ಇನ್ನು ಮುಂದೆ ಶಾಲಾ – ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಸ್ವತಃ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಎಲ್ಲರೂ ಸಂವಿಧಾನ ತೋರಿದ ಮಾರ್ಗದಲ್ಲಿ ಕೆಲಸ ಮಾಡಲು ಸಚಿವರು ಸೂಚಿಸಿದರು.
ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಂದ ಹೇಳಿಸುವುದಕ್ಕೆ ಪೂರಕವಾಗಿ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲು ಸಭೆ ನಡೆಸಿದ್ದಾರೆ.ಇನ್ನು ಶಾಲಾ ಕಾಲೇಜುಗಳು ಆರಂಭವಾದ ಸಂದರ್ಭದಲ್ಲಿ ಶುಲ್ಕದ ನೆಪವೊಡ್ಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವಂಚಿಸುವಂತಿಲ್ಲ ಎಂದು ಅವರು ಹೇಳಿದ್ದರು.
“ಕಳೆದ ಸರ್ಕಾರದ ಅವಧಿಯಲ್ಲಿ ಬಡ ಮಕ್ಕಳು ಶುಲ್ಕ ಪಾವತಿಸದೇ ಇದ್ದರೆ ಶಿಕ್ಷಣ ಪಡೆಯುವುದಕ್ಕೆ ಸಾಕಷ್ಟು ಅಡ್ಡಿ ಮಾಡಲಾಗುತ್ತಿತ್ತು. ಆದರೆ ಶಿಕ್ಷಣ ಎನ್ನುವುದು ಪ್ರಾಥಮಿಕವಾದ ಹಕ್ಕಾಗಿದ್ದು ಶುಲ್ಕದ ನೆಪವೊಡ್ಡಿ ಯಾವುದೇ ವಿದ್ಯಾರ್ಥಿಗೂ ಕೂಡಾ ಯಾರೂ ಸಹ ಶಿಕ್ಷಣದ ಸೌಲಭ್ಯವನ್ನು ವಂಚಿಸುವಂತಿಲ್ಲ” ಎಂದು ಟ್ವಿಟ್ ಮಾಡಿದ್ದರು.
ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡದೇ ತಮ್ಮದೇ ದುರಾಡಳಿತದಲ್ಲಿ ಮುಳುಗಿದ್ದ ಈ ಹಿಂದಿನ ಸರ್ಕಾರದ ಅರಾಜಕತೆಯನ್ನು ಖಂಡಿಸುತ್ತಾ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಕ್ಕೆ ವಿದ್ಯಾರ್ಥಿ ವೇತನ ದೊರೆಯುವಂತೆ ಎಲ್ಲಾ ಅಧಿಕಾರಿಗಳಿಗೂ ಸಹ ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದರು.
ವರದಿ :- ನಾಗೇಂದ್ರ ಪ್ರಸಾದ್