ತುಮಕೂರು:ಯಾರೋ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ.

ತುಮಕೂರು:ಯಾರೋ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿರುವ ಚಿಲೋಟ್ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಡೆದಿದೆ.

ಇಲ್ಲಿನ ಟೂಡಾ ಲೇಔಟ್‌ನ ಗಂಗಾಧರೇಶ್ವರ ಬಡಾವಣೆಯ ನಿವಾಸಿ ಪ್ರಸಾದ್ (೪೦) ಎಂಬುವರೇ ಕೊಲೆಯಾಗಿರುವ ದುರ್ದೈವಿ.

ಕೊಲೆಯಾಗಿರುವ ಪ್ರಸಾದ್ ಟಿವಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ಮದ್ಯ ಸೇವಿಸಲು ಬಾರ್ ಅಂಡ್ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಿ ಪಕ್ಕದ ಬೀಡಾ ಅಂಗಡಿಯಲ್ಲಿ ಬೀಡಾ ಜಗಿದಿದ್ದಾರೆ. ಸಮಯ ಮೀರಿದ್ದರಿಂದ ಬೀಡಾ ಅಂಗಡಿಯವರು ಈತನನ್ನು ಬೈಕ್ ಬಳಿಗೆ ಬಿಟ್ಟು ಮನೆಗೆ ಹೋಗುವಂತೆ ಹೇಳಿ, ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾರೆ.

ಇದಾದ ಬಳಿಕ ಯಾರೋ ದುಷ್ಕರ್ಮಿಗಳು ಈತನ ಮೇಲೆ ದಾಳಿ ನಡೆಸಿ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆಗೈದು ಪರಾರಿಯಾಗಿದ್ದಾರೆ.

ತಡರಾತ್ರಿಯಾದರೂ ಪ್ರಸಾದ್ ಮನೆಗೆ ವಾಪಸ್ಸಾಗದಿದ್ದರಿಂದ ಅವರ ಪತ್ನಿ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಮೊಬೈಲ್ ರಿಂಗ್ ಆಗುತ್ತಿದ್ದು, ಕರೆ ಸ್ವೀಕರಿಸಿಲ್ಲ. ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಸಹಜವಾಗಿ ಪ್ರಸಾದ್ ರಾತ್ರಿ ವೇಳೆ ಮನೆಗೆ ಹೋಗದಿದ್ದ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿ ತಿಳಿಸುತ್ತಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಆದರೆ ರಾತ್ರಿ ಎಷ್ಟು ಬಾರಿ ಮೊಬೈಲ್‌ಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ.

ಬೆಳಗಿನ ಜಾವ ಕುಟುಂಬದವರು ಪ್ರಸಾದ್‌ನನ್ನು ಹುಡುಕಾಟ ನಡೆಸುತ್ತಾ ಗಂಗಸಂದ್ರ ಸಮೀಪದ ರಿಂಗ್ ರಸ್ತೆಯಲ್ಲಿರುವ ಚಿಲೋಟ್ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಹೋದಾಗ ಕೊಲೆಯಾಗಿ ಶವ ಬಿದ್ದಿರುವುದು ಕಂಡು ಬಂದಿದೆ.

ಈ ಕೊಲೆಗೆ ನಿಖರ ಕಾರಣವೇನೆಂಬುದು ತಿಳಿದು ಬಂದಿಲ್ಲ, ಪೊಲೀಸರ ತನಿಯಿಂದಷ್ಟೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

 

ವಿಶೇಷ ತಂಡ ರಚನೆ:ಈ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಗ್ರಾಮಾಂತರ ಸಿಪಿಐ ರಾಮಕೃಷ್ಣಯ್ಯ, ತಿಲಕ್‌ಪಾರ್ಕ್ ಸಿಪಿಐ ಮುನಿರಾಜು, ಪಿಎಸ್‌ಐಗಳಾದ ಲಕ್ಷ್ಮಯ್ಯ, ನವೀನ್ ಹಾಗೂ ಶೇಷಾದ್ರಿ ರವರನ್ನೊಳಗೊಂಡ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ರಚಿಸಿದ್ದಾರೆ.

ಈ ವಿಶೇಷ ತಂಡದ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶೀಘ್ರ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version