ಅಫ್ಘಾನಿಸ್ತಾನ: ಮಿಲಿಟರಿ ಆಸ್ಪತ್ರೆಯ ಬಳಿ ಅವಳಿ ಸ್ಫೋಟ, ಗುಂಡಿನ ದಾಳಿ; 19 ಮಂದಿ ಮೃತ್ಯು
ಕಾಬೂಲ್, ನ.2: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಿಲಿಟರಿ ಆಸ್ಪತ್ರೆಯ ಬಳಿ ಮಂಗಳವಾರ ಅವಳಿ ಬಾಂಬ್‌ಸ್ಫೋಟ ಹಾಗೂ ಆ ಬಳಿಕ ನಡೆದ ಗುಂಡಿನ ದಾಳಿಯಿಂದ ಕನಿಷ್ಟ 19 ಮಂದಿ ಮೃತಪಟ್ಟಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಆರೋಗ್ಯ ಸಚಿವಾಲಯ ಹೇಳಿದೆ.
ಇದು ಆತ್ಮಹತ್ಯಾ ಬಾಂಬ್ ದಾಳಿಯಾಗಿದೆ. ಗುಂಡಿನ ದಾಳಿಯೂ ದುಷ್ಕರ್ಮಿಗಳ ಕೃತ್ಯವಾಗಿದೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿರುವುಾಗಿ ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಕಾಬೂಲ್‌ನ ವಜೀರ್ ಅಕ್ಬರ್‌ಖಾನ್ ಪ್ರದೇಶದಲ್ಲಿರುವ 400 ಬೆಡ್‌ಗಳನ್ನು ಹೊಂದಿರುವ ಸರ್ದಾರ್ ಮುಹಮ್ಮದ್ ದೌದ್‌ಖಾನ್ ಮಿಲಿಟರಿ ಆಸ್ಪತ್ರೆಯ ಪ್ರವೇಶದ್ವಾರದ ಬಳಿ 2 ಬಾಂಬ್ ಸ್ಫೋಟ ಸಂಭವಿಸಿದೆ. ಬಳಿಕ ಗುಂಡಿನ ದಾಳಿ ನಡೆದ ಸದ್ದು ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆವರದಿ ಮಾಡಿದೆ. ಸ್ಫೋಟ ನಡೆದ ಬಳಿಕ ಪ್ರದೇಶಕ್ಕೆ ಭದ್ರತಾ ಪಡೆಗಳನ್ನು ರವಾನಿಸಿರುವುದಾಗಿ ಆಂತರಿ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಮೊದಲ ಸ್ಫೋಟ ಆಸ್ಪತ್ರೆಯ ಎದುರುಗಡೆ ಸಂಭವಿಸಿದ್ದರೆ ಕೆಲವೇ ಕ್ಷಣಗಳಲ್ಲಿ ಸಮೀಪದಲ್ಲೇ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಪೋಟದ ಬಳಿಕ ಕಪ್ಪು ಹೊಗೆಯ ಜತೆ ಬೆಂಕಿಯ ಜ್ವಾಲೆ ಆಕಾಶದೆತ್ತರಕ್ಕೆ ವ್ಯಾಪಿಸಿರುವ ಫೋಟೊವನ್ನು ಸ್ಥಳೀಯರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರೀ ಸ್ಫೋಟದ ಸದ್ದಿನ ಜೊತೆಗೇ ಗುಂಡು ಹಾರಾಟದ ಸದ್ದು ಕೇಳಿದೊಡನೆ ಆಸ್ಪತ್ರೆಯಿಂದ ಹೊರಗೆ ಓಡಿದ್ದೇನೆ. ಆಗ ಮತ್ತೊಂದು ಸ್ಫೋಟದ ಸದ್ದು ಕೇಳಿಸಿದೆ. ಆಸ್ಪತ್ರೆಯ ಆವರಣದಲ್ಲಿ ಸ್ಫೋಟ ನಡೆದಿದೆಯೇ ಎಂಬುದು ಖಚಿತವಾಗಿಲ್ಲ ಎಂದು ಆ್ಪತ್ರೆಯ ಸಿಬಂದಿಯೊಬ್ಬರು ಹೇಳಿದ್ದಾರೆ.
ಸ್ಫೋಟದ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ. ಆದರೆ , ಐಸಿಸ್ ಸಂಘಟನೆಯ ಹಲವು ಸದಸ್ಯರು ಆಸ್ಪತ್ರೆಗೆ ನುಗ್ಗಿ ಭದ್ರತಾ ಪಡೆಗಳೊಂದಿಗೆ ಸಂಘರ್ಷ ನಡೆಸಿವೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಬಖ್ತಾರ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಆಗಸ್ಟ್‌ನಲ್ಲಿ ಕಾಬೂಲ್ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬಂದಂದಿನಿಂದ ಮಸೀದಿ ಹಾಗೂ ಇತರ ಸ್ಥಳಗಳನ್ನು ಗುರಿಯಾಗಿಸಿಕೊಂಡು ಐಸಿಸ್ ನಿರಂತರ ಆಕ್ರಮಣಗಳನ್ನು ನಡೆಸುತ್ತಿದೆ. 2017ರಲ್ಲಿ ಇದೇ ಮಿಲಿಟರಿ ಆಸ್ಪತ್ರೆಯ ಮೇಲೆ ಐಸಿಸ್ ನಡೆಸಿದ್ದ ದಾಳಿಯಲ್ಲಿ 30್ಕೂ ಅಧಿಕ ಮಂದಿ ಮೃತರಾಗಿದ್ದರು.