ನಿತ್ಯ ಆರು ಸಾವಿರ ಕೋವಿಡ್ ಪರೀಕ್ಷೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಸೂಚನೆ*

 

ತುಮಕೂರು

ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ನಿತ್ಯ ಆರು ಸಾವಿರ ಕೋವಿಡ್ ಪರೀಕ್ಷೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ‌ಸಂಬಂಧ ಜಿಲ್ಲಾ ‌ಮಟ್ಟದ‌ ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಪರಿಶೀಲನಾ ಸಭೆ ನಡೆಸಿ‌ ಮಾತನಾಡಿದ ಸಚಿವರು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಹೆಚ್ಚು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವಂತೆಯೂ ನಿರ್ದೇಶಿಸಿದರು.

 

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಭಾವನೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಬಾರದು‌. ಈ ಹಿಂದಿಗಿಂತಲೂ ಹೆಚ್ಚಾಗಿ ಕೋವಿಡ್ ಪರೀಕ್ಷೆ ಮಾಡಬೇಕು. ಇದರಿಂದ ಕೋವಿಡ್ ಅನ್ನು ನಿರೀಕ್ಷೆಗೂ ಮೀರಿ ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು‌.

 

ಈಗಾಗಲೇ ಜಿಲ್ಲೆಯಾದ್ಯಂತ ಗುರುತಿಸಿರುವ ಕೆಂಪುವಲಯ ಮತ್ತು ಹಾಟ್ ಸ್ಪಾಟ್ ಪ್ರದೇಶಗಳಲ್ಲಿನ ಸೋಂಕಿತರ ಕುಟುಂಬಸ್ಥರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ‌ ಡಾ. ನಾಗೇಂದ್ರಪ್ಪ ಅವರಿಗೆ ನಿರ್ದೇಶಿಸಿದರು.

 

ಶಿರಾ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕಗಳ ಅವಶ್ಯಕತೆಯಿದೆ ಎಂದು ಶಾಸಕ ರಾಜೇಶ್ ಗೌಡ ಕೇಳಿದಾಗ‌,‌ ‌ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಗೆ ದಾನಿಗಳು ಅನೇಕ ‌ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಶಿರಾ ಆಸ್ಪತ್ರೆಗೆ ಅವಶ್ಯಕತೆ ಇರುವ ಆಮ್ಲಜನಕ ‌ಸಿಲಿಂಡರ್‌ಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ‌ವೈ.ಎಸ್.ಪಾಟೀಲ ಅವರಿಗೆ ಸೂಚಿಸಿದರು.

 

ಶಾಸಕ ‌ಮಸಾಲ ಜಯರಾಮ್ ಮಾತನಾಡಿ, ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಣೆಯಾಗುತ್ತಿಲ್ಲವೆಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸ್ವಚ್ಛತಾ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿದೆ. ಎಲ್ಲಿ ಸ್ವಚ್ಚತೆ ನಿರ್ವಹಣೆ ಇಲ್ಲವೋ ಅಲ್ಲಿ ಸ್ವಚ್ಛತೆ ಕಾಪಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

 

ಬ್ಲಾಕ್ ‌ಫಂಗಸ್ ಗೆ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸೆ ನೀಡಬೇಕೆಂದು ಸರ್ಕಾರದ ‌ಆದೇಶವಿದೆ. ಅದರಂತೆ ಪ್ರತ್ಯೇಕವಾಗಿ ವಾರ್ಡ್ ಮೀಸಲಿರಿಸಿ ಸರ್ಕಾರದ ವತಿಯಿಂದ ಬರುವ ಮಾರ್ಗಸೂಚಿ ಅನ್ವಯ ಔಷಧ ಬಳಸಿ ಚಿಕಿತ್ಸೆ ನೀಡಬೇಕು. ತಜ್ಞರ ಅವಶ್ಯಕತೆ ಇದ್ದರೆ ಮೆಡಿಕಲ್ ‌ಕಾಲೇಜ್ ಗಳಿಂದ ಉಪಯೋಗಿಸಿಕೊಳ್ಳುವಂತೆ ಡಿಎಚ್ ಒ ಡಾ. ನಾಗೇಂದ್ರಪ್ಪ ಅವರಿಗೆ ತಿಳಿಸಿದರು.

 

ಪತ್ರಿಕಾ‌ವಿತರಕರಿಗೆ, ಹಾಲು ಹಾಗೂ ಪಡಿತರ ನೀಡುವ ಸಿಬ್ಬಂದಿಗೆ, ಅಲೆಮಾರಿಗಳಿಗೆ ,ಬೀದಿ ಬದಿ ವ್ಯಾಪಾರಿಗಳಿಗೆ , ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ವಕೀಲರಿಗೆ ಸೇರಿದಂತೆ ಅತ್ಯವಶ್ಯಕ ಎನ್ನುವ ವರ್ಗದವರಿಗೆ ಕೋವಿಡ್ ಲಸಿಕೆಯನ್ನು ನೀಡಬೇಕು ಎಂದು ಆರ್ ಸಿ ಹೆಚ್ ಅಧಿಕಾರಿ ಡಾ.ಕೇಶವರಾಜ್ ಅವರಿಗೆ ನಿರ್ದೇಶಿಸಿದರು.

 

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಇ.ಓ. ಡಾ.ಕೆ.ವಿದ್ಯಾಕುಮಾರಿ, ಡಿ.ಹೆಚ್.ಓ. ನಾಗೇಂದ್ರಪ್ಪ, ಡಿ.ಎಸ್. ಡಾ ಸುರೇಶ್ ಬಾಬು ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version