ಸ್ವಾರ್ಥ ಭಾವನೆ ಬಿಟ್ಟು ಸೇವಾ ಮನೋಭಾವ ರೂಢಿಸಿಕೊಳ್ಳಿ : ಡಿ ವೈ ಎಸ್ ಪಿ ಲಕ್ಷ್ಮಿಕಾಂತ್
ಕುಣಿಗಲ್ : ಯುವ ಜನಾಂಗ ಆಸೆ ಆಮಿಷಕ್ಕೆ ಬಲಿಯಾಗದೆ, ಆಧುನಿಕ ಜೀವನ ಶೈಲಿಗೆ ಮಾರುಹೋಗದೆ, ಸ್ವಾರ್ಥ ಭಾವನೆ ಬಿಟ್ಟು, ಸೇವಾ ಮನೋಭಾವ ರೂಡಿಸಿಕೊಳ್ಳಬೇಕು ಎಂದು ಕುಣಿಗಲ್ ಡಿ ವೈ ಎಸ್ ಪಿ ಲಕ್ಷ್ಮಿಕಾಂತ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಕೊತ್ತಗೆರೆ ಹೋಬಳಿ, ಬಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತ ಸೇವೆ, ತ್ಯಾಗ, ಸಹಕಾರ, ಸೌಹಾರ್ದ ಮುಂತಾದ ಗುಣಗಳು ಯುವಕರಲ್ಲಿದ್ದಾಗ ವಿಶಾಲ ಮನೋಭಾವ ಬೆಳೆದು ವೈವಿಧ್ಯಮಯ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಕಂಡ ಕನಸನ್ನು ನನಸು ಮಾಡಲು ಯುವ ಜನಾಂಗ ಪಣತೊಡಬೇಕಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶೆಟ್ಟಿಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉಮೇಶ್ ಎಸ್ ಎನ್ ಅವರು ಪದವಿ ಕಾಲೇಜಿನ ವಿದ್ಯಾರ್ಥಿಗಳು ಶೆಟ್ಟಿಕೆರೆ ಗ್ರಾಮದಲ್ಲಿ ಹಮ್ಮಿಕೊಂಡ ಶಿಬಿರದಲ್ಲಿ ಯಶಸ್ವಿಯಾಗಿ ಭಾಗವಹಿಸುವ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್ ಪುಟ್ಟರಾಜು ಅವರು ಮಾತನಾಡಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಬದುಕನ್ನು ಕಟ್ಟಿಕೊಳ್ಳಲು ಇಂತಹ ಶಿಬಿರಗಳು ಯಶಸ್ವಿ ಆಗುತ್ತದೆ ಎಂದರು.
ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ ಕೃಷ್ಣ ಅವರು ವಿದ್ಯಾರ್ಥಿಗಳ ಸೇವಾ ಮನೋಭಾವನೆ ಮತ್ತು ಕಾರ್ಯದಕ್ಷತೆಯನ್ನು ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಶಿಬಿರದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾಧಿಕಾರಿಗಳು ಹಾಗೂ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಎಂ ಗೋವಿಂದರಾಯ ಎಂ, ಘಟಕ 2 ರ ಅಧಿಕಾರಿ ಹನುಮಂತಪ್ಪ, ಘಟಕ 3 ರ ಅಧಿಕಾರಿ ಪ್ರೊ. ನಾಗಮ್ಮ ಎಚ್ ಎನ್, ಯುವ ಮುಖಂಡರಾದ ರಮೇಶ್, ಶಿಕ್ಷಕರಾದ ಸುರೇಶ್, ವಿಜಯ ರಾಘವನ್, ಕಾಲೇಜಿನ ಪ್ರಾಧ್ಯಾಪಕರಾದ ಮಂಜುಸ್ವಾಮಿ, ರವಿಕುಮಾರ್ ಕೆ, ಡಾ. ಎಸ್ ವಿಶ್ವೇಶ್ವರಯ್ಯ, ಡಾ. ಲಕ್ಷ್ಮಿನರಸಮ್ಮ, ರುಕ್ಮಿಣಿ ವಿ, ರೇಣುಕಾ, ಅಧೀಕ್ಷಕರಾದ ಚೆಲುವಮೂರ್ತಿ, ಪ್ರಥಮ ದರ್ಜೆ ಸಹಾಯಕರಾದ ಮಂಜುನಾಥ ಎಂ ಆರ್, ಅಭಿಷೇಕ್ ಹಾಜರಿದ್ದರು. ತೃತೀಯ ಬಿಎ ವಿದ್ಯಾರ್ಥಿನಿ ಹಂಸಶ್ರೀ ನಿರೂಪಿಸಿದರು. ದ್ವಿತೀಯ ಬಿ ಎ ವಿದ್ಯಾರ್ಥಿನಿ ಶುಭಾಷಿಣಿ ವರದಿ ವಾಚಿಸಿದರು, ನಯನ ಪ್ರಾರ್ಥಿಸಿ, ನಾಗೇಶ್ ಸ್ವಾಗತಿಸಿ, ಪೂರ್ಣಿಮಾ ವಂದಿಸಿದರು. ಶಿಬಿರಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.