ದೇಶದಲ್ಲಿ 150 ದಿನಗಳ ಕನಿಷ್ಠ ಮಟ್ಟಕ್ಕೆ ಸಕ್ರಿಯ ಕೋವಿಡ್ ಪ್ರಕರಣ

ದೇಶದಲ್ಲಿ 150 ದಿನಗಳ ಕನಿಷ್ಠ ಮಟ್ಟಕ್ಕೆ ಸಕ್ರಿಯ ಕೋವಿಡ್ ಪ್ರಕರಣ

ಹೊಸದಿಲ್ಲಿ, ಆ.23: ಐದು ತಿಂಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 3.5 ಲಕ್ಷದ ಮಟ್ಟಕ್ಕಿಂತ ಕೆಳಗಿಳಿದಿದೆ. ದೇಶದಲ್ಲಿ ಶೇಕಡ 50ರಷ್ಟು ವಯಸ್ಕರಿಗೆ ಲಸಿಕೆ ನೀಡಿದ ಮೈಲುಗಲ್ಲನ್ನು ತಲುಪಲು ಸಜ್ಜಾಗಿರುವ ನಡುವೆಯೇ ದೇಶದಲ್ಲಿ ಸಾಂಕ್ರಾಮಿಕದ ಹರಡುವಿಕೆ ಕಡಿಮೆಯಾಗಿರುವುದು ಸರ್ಕಾರಿ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

 

ಕರಾಳ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ರವಿವಾರ 3,41,189ಕ್ಕೆ ಇಳಿದಿದೆ. ಇದು 2021ರ ಮಾರ್ಚ್ 20ರ ಬಳಿಕ ದಾಖಲಾದ ಕನಿಷ್ಠ ಸಂಖ್ಯೆಯಾಗಿದೆ. ಇದಕ್ಕೆ ತದ್ವಿರುದ್ಧವಾಗಿ ದೇಶದಲ್ಲಿ 37.5 ಲಕ್ಷ ಸಕ್ರಿಯ ಪ್ರಕರಣಗಳು ಮೇ 9ರಂದು ದಾಖಲಾಗಿದ್ದವು. ಅಂದರೆ ಎರಡನೇ ಅಲೆಯ ಉತ್ತುಂಗದ ಮಟ್ಟಕ್ಕೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 90ರಷ್ಟು ಇಳಿಕೆ ಕಂಡುಬಂದಿದೆ.

 

ಈ ನಡುವೆ ಭಾರತ ಶೇಕಡ 50ರಷ್ಟು ವಯಸ್ಕ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದ ಹಂತ ತಲುಪಲು ಸಜ್ಜಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಇದುವರೆಗೆ 58.15 ಡೋಸ್‌ಗಳನ್ನು ನೀಡಲಾಗಿದ್ದು, ಒಟ್ಟು 45.07 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. 32 ಕೋಟಿ ಮಂದಿಗೆ ಒಂದು ಡೋಸ್ ನೀಡಲಾಗಿದ್ದರೆ, 13.07 ಕೋಟಿ ಮಂದಿಗೆ ಎರಡೂ ಡೋಸ್‌ಗಳು ಪೂರ್ಣಗೊಂಡಿವೆ.

 

2021ರ ಒಟ್ಟು ಜನಸಂಖ್ಯೆ ಅಂದಾಜಿನ ಪ್ರಕಾರ ದೇಶದಲ್ಲಿ 94 ಕೋಟಿ ಮಂದಿ ವಯಸ್ಕರು ಇದ್ದಾರೆ. ಇದುವರೆಗೆ ಈ ಪೈಕಿ ಶೇಕಡ 48ರಷ್ಟು ಮಂದಿಗೆ (ಶೇಕಡ 34 ಮಂದಿಗೆ ಒಂದು ಡೋಸ್, ಶೇಕಡ 18 ಮಂದಿಗೆ ಎರಡು ಡೋಸ್) ಲಸಿಕೆ ನೀಡಲಾಗಿದೆ. ರವಿವಾರ ದೇಶದಲ್ಲಿ 25,426 ಹೊಸ ಪ್ರಕರಣಗಳು ವರದಿಯಾಗಿದ್ದು, 385 ಮಂದಿ ಸಾವನ್ನಪ್ಪಿದ್ದಾರೆ. ಏಳು ದಿನಗಳ ಸರಾಸರಿ 156 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ 31,965ಕ್ಕೆ ಇಳಿದಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version