ಅಮೇರಿಕಾದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭಾರತದ ಕಾರ್ಮಿಕರನ್ನು ಕಡಿಮೆ ವೇತನಕ್ಕೆ ದುಡಿಸುತ್ತಿದ್ದ ಸಂಸ್ಥೆ: ದೂರು ದಾಖಲು
ನ್ಯೂಯಾರ್ಕ್: ಅಮೆರಿಕಾದಲ್ಲಿರುವ ಸಂಘಟನೆ ಬೊಚಸನ್ವಾಸಿ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾ ಭಾರತದಿಂದ ನೂರಾರು ಕಾರ್ಮಿಕರಿಗೆ ಆಮಿಷವೊಡ್ಡಿ ಅಮೆರಿಕಾದ್ಯಂತ ಇರುವ ತನ್ನ ದೇವಳ ಸ್ಥಳಗಳಲ್ಲಿ ಅವರು ಕಡಿಮೆ ವೇತನಕ್ಕೆ ಕೆಲಸ ಮಾಡುವಂತೆ ಬಲವಂತಪಡಿಸಿದೆ ಎಂಬ ಆರೋಪ ಎದುರಿಸುತ್ತಿದೆ. ಈ ಕುರಿತಂತೆ ಭಾರತೀಯ ಕೆಲಸಗಾರರ ತಂಡವೊಂದು ಈ ವರ್ಷದ ಮೇ ತಿಂಗಳಿನಲ್ಲಿ ಅಮೆರಿಕಾದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಅಮೆರಿಕಾದ ನ್ಯೂಜೆರ್ಸಿಯಲ್ಲಿ ಸ್ವಾಮಿನಾರಾಯಣ ದೇವಸ್ಥಾನದ ಕೆಲಸಕ್ಕಾಗಿ ಕನಿಷ್ಠ ವೇತನಕ್ಕೆ ದುಡಿಸಿಕೊಳ್ಳಲಾಗಿದೆ ಎಂದು ದೂರುದಾರರು ಆರೋಪಿಸಿದ್ಧಾರೆ.
ದೂರಿನಲ್ಲಿ ತಿಳಿಸಿರುವಂತೆ ಸಂಘಟನೆಯು ಭಾರತದಿಂದ ಕಾರ್ಮಿಕರಿಗೆ ಆಮಿಷವೊಡ್ಡಿ ಅಟ್ಲಾಂಟ, ಚಿಕಾಗೋ, ಹೂಸ್ಟನ್. ಲಾಸ್ ಏಂಜಲಿಸ್ ಮುಂತಾದೆಡೆ ದೇವಳ ಕಾರ್ಯಗಳಿಗೆ ತಿಂಗಳಿಗೆ ಕೇವಲ 450 ಡಾಲರ್ ವೇತನಕ್ಕೆ ಕೆಲಸ ಮಾಡುವಂತೆ ಬಲವಂತಪಡಿಸಿದೆ ಎಂದು ಆರೋಪಿಸಲಾಗಿದೆ.
2018ರಿಂದ ಆರಂಭಗೊಂಡು ಆರ್-1 ವೀಸಾಗಳ ಮುಖಾಂತರ 200ಕ್ಕೂ ಅಧಿಕ ಭಾರತೀಯರನ್ನು ಕೆಲಸಕ್ಕೆ ಕರೆಸಿಕೊಳ್ಳಲಾಗಿದೆ ಹಾಗೂ ನ್ಯೂಜೆರ್ಸಿ ನಿರ್ಮಾಣ ಸ್ಥಳದಲ್ಲಿ ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವಂತೆ ಮಾಡಲಾಗಿದೆ ಎಂದು ದೂರಲಾಗಿದೆ. ಅಮೆರಿಕಾದ ಎಫ್‍ಬಿಐ ನೇತೃತ್ವದ ದಾಳಿಯು ಮೇ 11ರಂದು ಸುಮಾರು 200 ಕಾರ್ಮಿಕರನ್ನು ರಕ್ಷಿಸಿದೆ ಹಾಗೂ ಅವರಲ್ಲಿ ಹೆಚ್ಚಿನವರು ದಲಿತರು, ಬಹುಜನರು ಮತ್ತು ಆದಿವಾಸಿಗಳು ಎಂದು ಇಂಡಿಯಾ ಸಿವಿಲ್ ವಾಚ್ ಇಂಟರ್‍ನ್ಯಾಷನಲ್ ಹೇಳಿದೆ.
ಕಾರ್ಮಿಕರಿಗೆ ತಲಾ ಗಂಟೆಗೆ 1.2 ಡಾಲರ್ ನೀಡಲಾಗುತ್ತಿದ್ದು ಇದು ಅಮೆರಿಕಾದ ಕನಿಷ್ಠ ವೇತನವಾದ ಗಂಟೆಗೆ 7.25 ಡಾಲರಿಗಿಂತ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ. ಇಲ್ಲಿ ಕಾರ್ಮಿಕರನ್ನು ದಿನದ 13 ಗಂಟೆ ದುಡಿಸಿ ಅವರಿಗೆ 50 ಡಾಲರ್ ನಗದು ನೀಡಿ ಉಳಿದ ಹಣವನ್ನು ಭಾರತದ ಅವರ ಖಾತೆಗಳಲ್ಲಿ ಜಮೆ ಮಾಡಲಾಗುತ್ತಿತ್ತು ಎಂದು ಸಂಸ್ಥೆ ಹೇಳಿದೆ.
ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಬೋಚಸನ್ವಾಸಿ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾದ ಅಧಿಕಾರಿಗಳು ವಾದಿಸುತ್ತಿದ್ದಾರೆ.