ಸಚಿವೆ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್ ಸೌಲಭ್ಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆ.18: ಶಶಿಕಲಾ ಜೊಲ್ಲೆ ಅವರಿಗೆ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೂ ಝೀರೋ ಟ್ರಾಫಿಕ್(ತಡೆರಹಿತ ಸಂಚಾರ) ಸೌಲಭ್ಯ ಕಲ್ಪಿಸಿದ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ರಾಮಮೂರ್ತಿ ನಗರದ ನಿವಾಸಿ ಜಿ.ಬಾಲಾಜಿ ನಾಯ್ಡು ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ನಗರ ಪೊಲೀಸ್ ಆಯುಕ್ತ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿತು. ಝೀರೋ ಟ್ರಾಫಿಕ್‌ಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಉತ್ತರಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ಹೊರಡಿಸಿದೆ.
ಶಶಿಕಲಾ ಜೊಲ್ಲೆ ಅವರು ಬರೀ ಶಾಸಕರಾಗಿದ್ದರಿಂದ ಅವರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಲು ಬರುವುದಿಲ್ಲ. ಇದರಿಂದ, 2021ರ ಆ.4ರಂದು ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಯಿತು. ಸಾಮಾಜಿಕ ಸಮಾನತೆಗೆ ಧಕ್ಕೆಯಾಗಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ರಾಜಭವನದಲ್ಲಿ ಆ.4ರ ಮಧ್ಯಾಹ್ನ 2.15ರಿಂದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಿಗದಿಯಾಗಿತ್ತು.ಹೊಸದಿಲ್ಲಿಯಲ್ಲಿದ್ದ ಶಶಿಕಲಾ ಜೊಲ್ಲೆ, ಸಂಪುಟದಲ್ಲಿ ಸ್ಥಾನ ಖಾತರಿಯಾದ ಬಳಿಕ ವಿಮಾನದಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಬೇಕಿದ್ದ ವಿಮಾನ ಅರ್ಧ ಗಂಟೆಗೂ ಹೆಚ್ಚು ತಡವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಇದರಿಂದ, ಜೊಲ್ಲೆ ಅವರು ಝೀರೋ ಟ್ರಾಫಿಕ್ ಸೌಲಭ್ಯ ಪಡೆದುಕೊಂಡಿದ್ದರು.