ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರ: ಸಂಸ್ಥೆಗಳಿಗೆ ಸೂಚನೆ ನೀಡುವ ಬಗ್ಗೆ ಪರಿಗಣಿಸಬಹುದು; ಹೈಕೋರ್ಟ್
ಬೆಂಗಳೂರು, ಆ.18: ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲು ಕಲ್ಪಿಸಲು ಸರಕಾರಿ ಸ್ವಾಮ್ಯದ ನಿಗಮ-ಮಂಡಳಿಗಳು, ಶಾಸನಬದ್ಧ ಪ್ರಾಧಿಕಾರಗಳು ಮತ್ತು ಸಂಸ್ಥೆಗಳಿಗೆ ಸೂಚನೆ ನೀಡುವ ಬಗ್ಗೆ ಪರಿಗಣಿಸಬಹುದು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ತಿಳಿಸಿದೆ.
ತೃತೀಯ ಲಿಂಗಿಗಳ ಪರ ಕೆಲಸ ಮಾಡುವ `ಸಂಗಮ’ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬುಧವಾರ ಹೈಕೋರ್ಟ್‍ನಲ್ಲಿ ನಡೆಯಿತು.
ಅರ್ಜಿದಾರ ಸಂಗಮ ಸಂಘಟನೆ ಪರ ವಾದಿಸಿದ ವಕೀಲರು, ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಕಲ್ಪಿಸಿರುವ ಶೇ.1 ಸಮತಲ ಮೀಸಲಾತಿ(ಹಾರಿಜಾಂಟಲ್ ರಿಸರ್ವೆಷನ್) ಸೌಲಭ್ಯ ಸರಕಾರಿ ಸ್ವಾಮ್ಯದ ಎಲ್ಲ ನಿಗಮ-ಮಂಡಳಿ ಹಾಗೂ ಪ್ರಾಧಿಕಾರಗಳಿಗೂ ಅನ್ವಯವಾಗುವಂತೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸರಕಾರಿ ಪರ ವಕೀಲರು ವಾದಿಸಿ, ಅರ್ಜಿಯಲ್ಲಿ ನಿಗಮ-ಮಂಡಳಿಗಳನ್ನು ಪ್ರತಿವಾದಿಯಾಗಿ ಮಾಡಲಾಗಿಲ್ಲ. ಅವುಗಳನ್ನು ಪ್ರತಿವಾದಿ ಮಾಡದೆ ನಿರ್ದೇಶನ ನೀಡಲು ಬರುವುದಿಲ್ಲ. ಬೇಕಿದ್ದರೆ ಅರ್ಜಿದಾರರು ಎಲ್ಲ ನಿಗಮ-ಮಂಡಳಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಯಾಗಿ ಸೇರಿಸಲಿ ಅಥವಾ ಈ ವಿಚಾರವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಲಿ ಅವುಗಳಿಗೆ ನೋಟಿಸ್ ಜಾರಿಗೊಳಿಸಿದ ಬಳಿಸಿ ಅವರ ವಾದ ಆಲಿಸಬೇಕಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ನಿಗಮ-ಮಂಡಳಿಗಳನ್ನು ಪ್ರತಿವಾದಿಯಾಗಿ ಸೇರಿಸುವುದು, ಬಿಡುವುದು ಅರ್ಜಿದಾರರಿಗೆ ಬಿಟ್ಟ ವಿಚಾರ. ಆದರೆ, ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆಗೊಳಿಸಿ ಸರಕಾರದ ಎಲ್ಲ ಹುದ್ದೆಗಳ ನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲ ವರ್ಗಗಳಲ್ಲಿ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ, ರಾಜ್ಯ ಸರಕಾರ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸುವ ಬಗ್ಗೆ ಸರಕಾರಿ ಸ್ವಾಮ್ಯದ ಎಲ್ಲ ನಿಗಮ-ಮಂಡಳಿಗಳು, ಪ್ರಾಧಿಕಾರ ಮತ್ತು ಸಂಸ್ಥೆಗಳಿಗೆ ನಿರ್ದೇಶನ ಅಥವಾ ಸಲಹೆ ನೀಡುವ ಕುರಿತು ಪರಿಗಣಿಸಬಹುದು ಎಂದು ನ್ಯಾಯಪೀಠ ಸರಕಾರಕ್ಕೆ ಹೇಳಿ, ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.