ಬೆಂಗಳೂರಿನಲ್ಲಿ ಭಾರೀ ಮಳೆ: ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

ಬೆಂಗಳೂರಿನಲ್ಲಿ ಭಾರೀ ಮಳೆ: ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

 

ಬೆಂಗಳೂರು,: ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇನ್ನೆರಡು ದಿನಗಳ ಕಾಳ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವವಿರುವ ಬಗ್ಗೆ ಹವಾಮಾನ ಮುನ್ಸೂಚನೆ ಇದೆ. ಬೆಂಗಳೂರು ಮಳೆಯನ್ನು  ಗಂಭೀರವಾಗಿ ಪರಿಗಣಿಸಬೇಕು. ಮಳೆಯನ್ನು ನಿಭಾಯಿಸುವ ವಿಧಾನ ಬದಲಾಯಿಸಿ, ಮಳೆಯಿಂದ ಆಗುತ್ತಿರುವ ಹಾನಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದ ಮುಖ್ಯಮಂತ್ರಿಗಳು, ಬೆಂಗಳೂರು ಅಂತರ್ ರಾಷ್ಟ್ರೀಯ ನಗರವಾಗಿದ್ದು, ನಗರದಲ್ಲಿ ಮಳೆಯಿಂದಾಗುವ ಹಾನಿಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈ ಬಾರಿ ಮಳೆಯ ಕಾರಣ ಎಲ್ಲಲ್ಲಿ ಹಾನಿಯಾಗಿದೆ ಎನ್ನುವ ಬಗ್ಗೆ ಹಾಗೂ ಕೈಗೊಂಡಿರುವ ಕ್ರಮ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಚರಂಡಿಯಿಂದ ನೀರು ಹೊರಬರುತ್ತದೆ ಎಂದರೆ ಅದನ್ನು ಸರಿಪಡಿಸುವುದು ಅಧಿಕಾರಿಗಳ ಜವಾಬ್ದಾರಿ.  ಸಮಸ್ಯೆಯನ್ನು ಅರ್ಥಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.

ತೀವ್ರ ಪ್ರವಾಹವಾಗುವ ಪ್ರದೇಶಗಳನ್ನು ಹಾಗೂ ಮುಖ್ಯ ಚರಂಡಿಗಳಲ್ಲಿ ಸಮಸ್ಯೆ ಇರುವಲ್ಲೆಲ್ಲಾ ಗುರುತಿಸಿ ಸರಿಪಡಿಸಬೇಕು. ಚರಂಡಿಗಳ ನಿರ್ಮಾಣ ಮಾಡುವಾಗ ಅವುಗಳ ವಿನ್ಯಾಸವನ್ನು ಸೂಕ್ತವಾಗಿ ಮಾಡಬೇಕು. ರಾಜಕಾಲುವೆಗಳ ಸುತ್ತಲು ಅಕ್ರಮ ಬಡಾವಣೆಗಳು ಬಂದಿವೆ. ಪ್ರಾರಂಭದಲ್ಲಿಯೇ ಅಕ್ರಮವನ್ನು ತಡೆಯಬೇಕಿತ್ತು. ಆದರೆ ಆಡಳಿತಾತ್ಮಕವಾಗಿ  ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸೂಚಿಸಿದರು.

ತೀವ್ರವಾಗಿ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿಯಾದರೂ ತಕ್ಷಣವೇ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಪ್ರತಿ 50 ಮೀಟರ್‍ಗಳಿಗೆ ರೀಚಾರ್ಚಿಂಗ್ ಪಿಟ್ಸ್ ಅಗತ್ಯವಿದೆ. ಪ್ರಾಯೋಗಿಕವಾಗಿ ಈ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮೊದಲು ಕಾರ್ಯಗತಗೊಳಿಸಲು ಸೂಚನೆ ನೀಡಿದರು.

ಮಾಹಿತಿ ಸಲ್ಲಿಸಿ: ಬೆಂಗಳೂರಿನಲ್ಲಿನ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುವ ಪ್ರದೇಶಗಳನ್ನು ವಲಯವಾರು ವಿಭಜಿಸಿ, ತಗ್ಗು ಪ್ರದೇಶಗಳ ಪಟ್ಟಿ ನೀಡಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ನೀರು ನುಗ್ಗಲು ಕಾರಣಗಳೇನು ಎಂದು ಗುರುತಿಸಿ, ಅದನ್ನು ತಡೆಯಲು ಅಲ್ಪಾವಧಿ ಕ್ರಮ ಹಾಗೂ ದೀರ್ಘಾವಧಿ ಕ್ರಮಗಳೇನು ಎಂದು ಪಟ್ಟಿ ಮಾಡಲು ಸೂಚಿಸಿದರು.

ಒಳಚರಂಡಿಗಳ ಪೈಕಿ ಎಲ್ಲಿ ತೀವ್ರ  ಸಮಸ್ಯೆ ಇದೆ ಅವುಗಳನ್ನು ಗುರುತಿಸಿ, ಎಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಅಂಥ ಎಷ್ಟು ಸ್ಥಳಗಳಿವೆ ಅವುಗಳನ್ನು ಗುರುತಿಸಲು ಪಟ್ಟಿ ಮಾಡಬೇಕು. ಸಮಗ್ರ ವರದಿಯನ್ನು ತಯಾರಿಸಿ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರಬೇಕು ಎಂದು ಸೂಚಿಸಿದರು.

ಮಳೆಯಾದ ಸಂದರ್ಭದಲ್ಲಿ ಹಾನಿಯಾಗಲು ಎರಡು ಪ್ರಮುಖ ಕಾರಣಗಳೆಂದರೆ, ತಗ್ಗಿನ ಪ್ರದೇಶ ಹಾಗೂ ತಡೆಗೋಡೆಗಳಲ್ಲಿಲ್ಲದಿರುವುದು. ಆದ್ದರಿಂದ ಸೂಕ್ತ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.

 

ಸಮರೋಪಾದಿಯಲ್ಲಿ ಹೂಳು ತೆಗೆಯಿರಿ

ಸಮರೋಪಾದಿಯಲ್ಲಿ ಒಳಚರಂಡಿಗಳ ಹೂಳು ತೆಗೆಯುವ ಕೆಲಸ  ಕೈಗೊಳ್ಳಲು ಸೂಚನೆ ನೀಡಿದ ಮುಖ್ಯಮಂತ್ರಿಗಳು ಒಟ್ಟು 842 ಕಿಮಿ ಪೈಕಿ 389 ಕಿ.ಮೀ ತಡೆಗೋಡೆ ನಿರ್ಮಿಸಲಾಗಿದೆ.   ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ 75 ಕಿ.ಮೀ ತಡೆಗೋಡೆ ಈಗಾಗಲೇ ನಿರ್ಮಿಸಲಾಗಿದ್ದು, ಬಾಕಿ 15 ಕಿ.ಮೀ ಗೆ ತಡೆಗೋಡೆ ನಿರ್ಮಿಸಬೇಕಿದೆ. 50 ಕಿ.ಮೀ ಹಳೆ ತಡೆಗೋಡೆಗಳ ಪುನರ್ ನಿರ್ಮಾಣ ಕಾರ್ಯವೂ ಚುರುಕುಗೊಳ್ಳಬೇಕು ಎಂದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿ ಗಳ ಪ್ರಧಾನಕಾರ್ಯದರ್ಶಿ ಮಂಜುನಾಥ್ ಪ್ರಸಾದ್,ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version