ಗುರುಗ್ರಾಮ: ನಮಾಝ್ ಸಲ್ಲಿಸುವ ಸ್ಥಳದಲ್ಲಿ ಹಿಂದು ಸಮಿತಿಯಿಂದ ಗೋರ್ವಧನ ಪೂಜೆ
ಗುರುಗ್ರಾಮ: ಪ್ರತಿ ಶುಕ್ರವಾರ ನಮಾಝ್ ನಡೆಯುತ್ತಿದ್ದ ಗುರುಗ್ರಾಮದ ಸೆಕ್ಟರ್ 12ಎ ಇಲ್ಲಿನ ಪ್ರದೇಶದಲ್ಲಿ ಶುಕ್ರವಾರ ಸಂಯುಕ್ತ ಹಿಂದು ಸಂಘರ್ಷ ಸಮಿತಿ ಸದಸ್ಯರು ಆಯೋಜಿಸಿದ್ದ ಗೋವರ್ಧನ ಪೂಜೆಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಭಾಗವಹಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಸಲ್ಲಿಕೆ ವಿರೋಧಿಸಿ ಇದೇ ಸಮಿತಿ ಸಹಿತ ಹಲವರು ಕಳೆದ ಹಲವಾರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಗೋವರ್ಧನ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಶ್ರಾ, ಪಟಾಕಿ ಮೇಲಿನ ನಿರ್ಬಂಧಗಳನ್ನು ಉಲ್ಲೇಖಿಸಿ “ನಿನ್ನೆ ದೀಪಾವಳಿಯಂದು ಹಿಂದುಗಳ ಮೇಲೆ ದೇಶಾದ್ಯಂತ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಪರಿಣಾಮವೇನು. ನಮ್ಮನ್ನು ಗೋಡೆಯತ್ತ ನೂಕಿದರೆ, ಪ್ರತಿಕ್ರಿಯೆಯಾಗಿ ನಾವು ಕೂಡ ದೂಡಬೇಕಾಗುತ್ತದೆ” ಎಂದು ಹೇಳಿದರು.
ನಮಾಝ್ ಕುರಿತು ಉಲ್ಲೇಖಿಸಿ “ನಿಮ್ಮ ರಾಜಕಾರಣಕ್ಕೆ ರಸ್ತೆಗಳನ್ನು ಬಳಸಬೇಡಿ. ನಾವು ಅದನ್ನು ಶಾಹೀನ್ ಭಾಗ್‍ನಲ್ಲಿ ನೋಡಿದ್ದೇವೆ. ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ತಮಾಷಾ ಸೃಷ್ಟಿಸಿದರು. ಸಿಎಎ ಅನ್ನು ವಾಪಸ್ ಪಡೆಯಲಾಯಿತೇ?” ಎಂದು ಪ್ರಶ್ನಿಸಿದರು.
“ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ರಸ್ತೆಗಳನ್ನು ತಡೆಯುವುದು ಯಾವುದೇ ಧರ್ಮದ ಭಾಗವಾಗಬಾರದು. ಅದು ನಡೆಯಬಾರದು. ಗುರುಗ್ರಾಮ ಜಗತ್ತಿನಾದ್ಯಂತ ಹೆಸರು ಪಡೆದ ನಗರ. ಇಲ್ಲಿ ನೀವು ರಸ್ತೆಗಳನ್ನು ತಡೆಯುತ್ತೀರಾ, ದಿಲ್ಲಿಯಲ್ಲಿ ತಡೆಯುತ್ತೀರಾ. ಇದು ದೇಶದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುವ ಒಂದು ವಿಧಾನ, ರಸ್ತೆಗಳ ಮೇಲೆ ಮೊದಲ ಹಕ್ಕು ಜನರಿಗಿದೆ, ಸ್ಥಳೀಯರು ವಿರೋಧಿಸಿದರೆ, ರಸ್ತೆಗಳಲ್ಲಿ ಕುಳಿತು ಅಡ್ಡಿಪಡಿಸಲು ಯಾರಿಗೂ ಹಕ್ಕಿಲ್ಲ. ಈ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ಆಜಾದಿಗೆ ನಿಜವಾದ ಹೋರಾಟ, ರಸ್ತೆಗಳಲ್ಲಿ ಮುಕ್ತವಾಗಿ ನಡೆಯಲು ನಮಗೆ ಸ್ವಾತಂತ್ರ್ಯ ಬೇಕು” ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ವಿರೋಧಿಸಿ ಗೋವರ್ಧನ ಪೂಜೆ ನಡೆಸುವುದಾಗಿ ಸಮಿತಿ ಕಳೆದ ಭಾನುವಾರ ತಿಳಿಸಿತ್ತು. ಗುರುಗ್ರಾಮದ ಎಂಟು ಕಡೆಗಳಲ್ಲಿ ನಮಾಝ್ ಸಲ್ಲಿಕೆಗೆ ಈ ಹಿಂದೆ ನೀಡಿದ್ದ ಅವಕಾಶವನ್ನು ಆಡಳಿತ ಗುರುವಾರವಷ್ಟೇ ವಾಪಸ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.