ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿ ನೇರ ಆಪರೇಶನ್ ಥಿಯೇಟರಿಗೆ ತೆರಳಿದ ವೈದ್ಯ!

ಕರುನಾಡು ಕಂಡ ಕರುಣಾಳು

 

 

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ #ಡಾ| #ಪದ್ಮನಾಭ_ಕಾಮತ್ ಅವರ ಮಾನವೀಯತೆಯ ಇನ್ನೊಂದು ಮುಖ.

ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಇನ್ನೊಬ್ಬರ ಮನೆಯಲ್ಲಿ ಉರಿಯುತ್ತಿದ್ದ ನಂದಾದೀಪ ಉಳಿಸಲು ಆಸ್ಪತ್ರೆಯ ಆಪರೇಶನ್ ಥಿಯೇಟರ್‌ಗೆ ತೆರಳಿ ಆಪರೇಶನ್ ಮಾಡಿ ಜೀವ ಉಳಿಸಿದ ಮಾನವತಾವಾದಿ.

 

ವೈದ್ಯಕೀಯ ವೃತ್ತಿಗೆ ದಾರಿ ತೋರಿದ ಅಪ್ಪ ನ ಉಸಿರಾಟ ಕೊನೆ ಹಂತದಲ್ಲಿದೆ ಎಂಬ ಹೃದಯ ಕಲುಕುವ ಸುದ್ದಿ ಬಂದಾಗ ಈ ವೈದ್ಯರು ಆಸ್ಪತ್ರೆಯಲ್ಲಿ ಇನ್ನೊಬ್ಬರ ಎದೆಬಡಿತ ಪರೀಕ್ಷಿಸುತ್ತಿದ್ದರು. ತರಾತುರಿಯಲ್ಲಿ ಮನೆಗೆ ತೆರಳಿದಾಗ ಆಗಲೋ ಈಗಲೋ ಎಂದಿದ್ದ ಅಪ್ಪ ನಿಗೆ ತುರ್ತು ಚಿಕಿತ್ಸೆ ನೀಡಿದರು.

ಮಗನ ಆಗಮನವಾದ ಬಳಿಕ ಮಗನ ಮುಂದೆಯೇ ಕೊನೆಯುಸಿರು ಎಳೆದರು. ಮೃತಪಟ್ಟವರೂ ವೈದ್ಯ, ಮಗನೂ ವೈದ್ಯರಾದರೂ ತಾವೇ ಸ್ವತಃ ಘೋಷಿಸುವಂತಿಲ್ಲ. ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ವೈದ್ಯರು ಡಾ| ಮಂಜುನಾಥ ಕಾಮತ್ ಅವರ ನಿಧನ ಸುದ್ದಿಯನ್ನು ಘೋಷಿಸಿದರು.

ಮೃತದೇಹ ಹಸ್ತಾಂತರಿಸುವ ಮುನ್ನ ಕಾಗದಪತ್ರಗಳ ತಯಾರಿಗೆ ಇನ್ನೂ 10-15 ನಿಮಿಷಗಳ ಬಿಡುವಿತ್ತು. ಅಷ್ಟರಲ್ಲಿ ಆಸ್ಪತ್ರೆಯಿಂದ ಬಂದ ತುರ್ತು ಕರೆಯಂತೆ ಹೃದ್ರೋಗಿಯೊಬ್ಬರನ್ನು ಬದುಕಿಸಿ ಬಂದ ಮಾನವೀಯ ಗುಣದ ವೈದ್ಯ ಡಾ| ಪದ್ಮನಾಭ ಕಾಮತರು.

ಶಸ್ತ್ರ ಚಿಕಿತ್ಸೆ ಪೂರೈಸಿದವರೇ ಮತ್ತೆ ಆಸ್ಪತ್ರೆಗೆ ಬಂದು ಅಪ್ಪನ ಮೃತದೇಹವನ್ನು ಮನೆಗೊಯ್ದರು.

 

ಡಾ| ಪದ್ಮನಾಭ ಕಾಮತ್ ಅವರ ತಂದೆ, ನಿವೃತ್ತ ಸರಕಾರಿ ವೈದ್ಯ, ದಕ್ಷಿಣ ಕನ್ನಡದ ಮಾಜಿ ಜಿಲ್ಲಾ ಮಲೇರಿಯಾ ಚಿಕಿತ್ಸಾ ಅಧಿಕಾರಿ ಡಾ| ಮಂಜುನಾಥ ಕಾಮತ್ ಕುಕ್ಕುಂದೂರು ಅವರು ಫೆ.26ರಂದು ರಾತ್ರಿ 9.45ಕ್ಕೆ ವಯೋಸಹಜವಾಗಿ ನಿಧನ ಹೊಂದಿದ್ದರು.

ಅವರ ಜನಪ್ರೀತಿಯ ಕುರಿತು ವಿ.ಕೆ. ವಾಲ್ಪಾಡಿ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ಅನೇಕ ಮಂದಿಗೆ ನಂಬಿಕೆ ಇರುವಂತೆ ವೈದ್ಯರು ಒಂದು ಹನಿ ನೀರು ಕೊಟ್ಟರೂ ಸಾಕು, ಗುಣವಾಗುತ್ತದೆ ಎಂಬಂತೆ ಅವರಲ್ಲಿಗೆ ವಿಶ್ವಾಸದಿಂದ ಬರುತ್ತಿದ್ದ ಅದೆಷ್ಟೋ ಮಂದಿಯಿದ್ದರು. ಆ ದಿಸೆಯಿಂದಲೇ ಅವರು ನಿವೃತ್ತರಾದ ಬಳಿಕವೂ ನಾರಾವಿಯಲ್ಲಿ ಕ್ಲಿನಿಕ್ ಇಟ್ಟಿದ್ದರು.

ಅದು ಅಕ್ಷರಶಃ ಜನರು ತೋರಿಸುತ್ತಿದ್ದ ಹಿಡಿ ಪ್ರೀತಿಗಾಗಿ ವಿನಾ ಬೇರೆ ಯಾವುದಕ್ಕೂ ಅಲ್ಲ.

 

ಫೆ.27ರಂದು ಕಾಮತರ ಅಪ್ಪನ ಔರ್ಧ್ವದೈಹಿಕ ಕಾರ್ಯಗಳು ನಡೆದವು.

ಆಗಲೂ ವಾಟ್ಸಾಪ್ ಮೂಲಕ ಡಾ| ಕಾಮತರು ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದರು.

ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಪದ್ಮನಾಭ ಕಾಮತರು ವಿರಮಿಸಿಕೊಳ್ಳಲೂ ಬಿಡುವಿಲ್ಲದಂತೆ ಅವರ ದೂರವಾಣಿ ಹೊಡೆದುಕೊಳ್ಳುತ್ತಿತ್ತು. ತಡವಾಗಿ ನೋಡಿದರೆ ಸ್ನಾತಕೋತ್ತರ ವಿದ್ಯಾರ್ಥಿಯದು. ಅಳುಕುತ್ತಾ ಅಳುಕುತ್ತಾ ಮಾತನಾಡಿದ ವಿದ್ಯಾರ್ಥಿಗಳು ಕೊಟ್ಟ ಸುದ್ದಿಯೇನೆಂದರೆ ಆಸ್ಪತ್ರೆಯ ಅಡುಗೆ ಸಿಬಂದಿಯೊಬ್ಬರಿಗೆ ತೀವ್ರ ಹೃದಯಾಘಾತವಾಗಿದೆ ಎಂದು. ತುರ್ತು ಚಿಕಿತ್ಸೆ ನೀಡಿಯಾಗಿದೆ.

ಶಾಕ್ ಟ್ರೀಟ್‌ಮೆಂಟ್ ನೀಡಿ ಆಗಿದೆ. ಈಗ ರೋಗಿಯ ಹೃದಯ ಬಡಿತ ಸ್ತಂಭನವಾಗಿದೆ ಎಂದು.

ಆಘಾತಕ್ಕೆ ಒಳಗಾದ ವ್ಯಕ್ತಿ ಡಾ| ಕಾಮತರಿಗೆ ತೀರಾ ಪರಿಚಿತರು ಆಗಿರಲಿಲ್ಲ . ತುರ್ತುಚಿಕಿತ್ಸೆ ನೀಡಿ, ಶಾಕ್ ಟ್ರೀಟ್‌ಮೆಂಟ್ ನೀಡಿಯೂ ಹೃದಯಸ್ತಂಭನವಾದರೆ ಆಂಜಿಯೋಪ್ಲಾಸ್ಟಿ ಮಾಡಲೇಬೇಕು ಎಂದು ಡಾ| ಕಾಮತರಿಗೆ ಅರಿವಿತ್ತು. ತಡವಾದರೆ ಬದುಕು ದಾಟಿಸುವುದು ಕಷ್ಟ ಎಂದು ಅಗಾಧ ಅನುಭವದಿಂದ ತಿಳಿದಿತ್ತು. ಹಾಗಾಗಿ ಕಿಂಚಿತ್ತೂ ತಡ ಮಾಡಲಿಲ್ಲ.

ಇತ್ತ ಮನೆಮಂದಿಯೆಲ್ಲ ಶೋಕದಲ್ಲಿ ಕುಳಿತಿದ್ದರೆ ಮನೆಯೆಲ್ಲ ಕುದಿಮೌನ, ಸಣ್ಣಗೆ ರೋದನ, ಒಳಗೊಳಗೇ ಆಕ್ರಂದನ.

ಆದರೆ ಕಾಮತರಿಗೆ ಅಪ್ಪ ಕಲಿಸಿಕೊಟ್ಟ ಮಾತು ಕಿವಿಗೆ ಅಪ್ಪಳಿಸುತ್ತಿತ್ತು.

ವೈದ್ಯೋ ನಾರಾಯಣೋ ಹರಿಃ. ಕಷ್ಟ ಕಾಲದಲ್ಲಿ ಕಾಯುವವನೇ ವೈದ್ಯ ಎಂದು.

ಮನೆಯವರಿಗೆ ಸಮಾಧಾನ ಮಾಡಿ ಕಾರೇರಿ ಹೊರಟೇಬಿಟ್ಟರು. ತತ್‌ಕ್ಷಣದ ಶಸ್ತ್ರಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳೂ ಸಜ್ಜಾಗಿದ್ದವು.

ಆಸ್ಪತ್ರೆ ತಲುಪಿದ ಡಾ| ಕಾಮತರು ಸಿನಿಮೀಯ ರೀತಿಯಲ್ಲಿ ಆಪರೇಶನ್ ಥಿಯೇಟರ್ ಹೊಕ್ಕವರೇ ಆಪರೇಶನ್‌ಗೆ ಮುಂದಾದರು. ನಡೆದದ್ದು ಕೆಲವೇ ನಿಮಿಷಗಳು.

ಅರೆ ಕ್ಷಣ ತಡವಾಗಿದ್ದರೂ ಆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕ್ಷೀಣವಾಗಿತ್ತು. ಆಪರೇಶನ್ ಯಶಸ್ವಿಯಾಗಿ ನಡೆದು ರೋಗಿಯ ಮುಖದಲ್ಲಿ ಮಂದಹಾಸ, ಮನೆಯವರಿಗೆ ನಿಟ್ಟುಸಿರು. ವಿದ್ಯಾರ್ಥಿಗಳ ಮುಖದಲ್ಲಿ ಆನಂದಬಾಷ್ಪ.

ಡಾ| ಕಾಮತರು ಮತ್ತೆ ಮನೆ ಕಡೆ ಹಾಜರು! ಇದಲ್ಲವೇ ಕರ್ತವ್ಯನಿಷ್ಠೆ. ಚಿಕಿತ್ಸೆ ಪಡೆದ ರೋಗಿ ಈಗ ಕ್ಷೇಮವಾಗಿದ್ದಾರೆ.

 

ಅಂದಹಾಗೆ ಅವರು ಆರಂಭಿಸಿದ ಕಾರ್ಡಿಯೋಲಜಿ ಆಟ್ ಡೋರ್‌ಸ್ಟೆಪ್ ಎಂಬ ವಾಟ್ಸಾಪ್ ಗ್ರೂಪಿನ ಮೂಲಕ ಇಂದು ರಾಜ್ಯದ 23 ಜಿಲ್ಲೆಗಳಲ್ಲಿ ಹಳ್ಳಿ ಹಳ್ಳಿಯ ಖಾಸಗಿ ಕ್ಲಿನಿಕ್, ಸರಕಾರಿ, ಖಾಸಗಿ ಸಣ್ಣ ಆಸ್ಪತ್ರೆಗಳಲ್ಲಿ ದಾನಿಗಳಿಂದ ಸಂಗ್ರಹಿಸಿದ 340 ಇಸಿಜಿ ಯಂತ್ರಗಳನ್ನು ನೀಡಿ 50 ಸಾವಿರ ಮಂದಿಯ ಇಸಿಜಿ ವರದಿ ತೆಗೆಯಲಾಗಿದೆ. ಸಾವಿರಾರು ಮಂದಿ ಅಲ್ಲೇ ಹತ್ತಿರದ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದು ಪವಾಡಸದೃಶರಾಗಿ ಬದುಕಿದ್ದಾರೆ.

ನೆನಪಿರಲಿ, ಬೇರೆ ಯಾರೇ ಆದರೂ 50 ಸಾವಿರ ಇಸಿಜಿಗಳಿಂದ ಎಷ್ಟು ಕೋಟಿ ರೂ. ಕಮಾಯಿ ಮಾಡುತ್ತಿದ್ದರು.

ಇವಿಷ್ಟೂ ಇಸಿಜಿಗಳಲ್ಲಿ ಡಾ| ಕಾಮತರು ಚಿಕಿತ್ಸೆ ನೀಡಿದ್ದು ಕೆಲವೇ ಕೆಲವು ರೋಗಿಗಳಿಗೆ ಮಾತ್ರ.

ಉಳಿದ ಅಷ್ಟೂ ಮಂದಿ ಅವರ ಊರ ಸಮೀಪವೇ ತುರ್ತು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದಿಷ್ಟು ವಿವರಗಳನ್ನು ಅವರು ಖಾತ್ರಿಪಡಿಸಿದ್ದಾರಾದರೂ ನಿಖರ ಮಾಹಿತಿ ಬಯಸಿದಾಗ, ‘ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ’ ಎಂದು ವಿನೀತರಾಗಿ ನುಡಿದಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version