ದಿಲ್ಲಿ ಗಲಭೆ ಪ್ರಕರಣದ ಆರೋಪಿಗಳ ಗುರುತಿಗೆ ಸಂಬಂಧಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯ ವ್ಯತಿರಿಕ್ತ ಹೇಳಿಕೆ

ದಿಲ್ಲಿ ಗಲಭೆ ಪ್ರಕರಣದ ಆರೋಪಿಗಳ ಗುರುತಿಗೆ ಸಂಬಂಧಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯ ವ್ಯತಿರಿಕ್ತ ಹೇಳಿಕೆ.

 

 

ಹೊಸದಿಲ್ಲಿ,ಅ.6: ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭ ಓರ್ವ ಪೊಲೀಸ್ ತಾನು  ಆರೋಪಿ ಗಲಭೆಕೋರರನ್ನು  ಗುರುತಿಸಿರುವುದಾಗಿ ಹೇಳಿದರೆ, ಇನ್ನೋರ್ವ ಪೊಲೀಸ್ ಅಧಿಕಾರಿ, ಅವರನ್ನು ತನಗೆ ಗುರುತಿಸಲು ಸಾಧ್ಯವಾಗಿಲ್ಲವೆಂದು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ಇವರಿಬ್ಬರಲ್ಲಿ ಒಬ್ಬಾತ ಸುಳ್ಳು ಹೇಳುತ್ತಿದ್ದಾನೆಂದು ಆಕ್ಷೇಪ ವ್ಯಕ್ತಪಡಿಸಿದೆ.

‘ಇದು ನಮ್ಮ ವ್ಯವಸ್ಥೆಯ ಶೋಚನೀಯ ಪರಿಸ್ಥಿತಿಯಾಗಿದೆ’ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಅವರು ಈಶಾನ್ಯ ದಿಲ್ಲಿ ಯ ಪೊಲೀಸ್ ಉಪ ಆಯುಕ್ತರಿಂದ ವರದಿಯನ್ನು ಕೋರಿದ್ದಾರೆ.

 

2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆ ಪ್ರಕರಣದ ವಿಚಾರಣೆ ಸಂದರ್ಭ ನಾಲ್ಕು ಮಂದಿ ಪ್ರಾಸಿಕ್ಯೂಶನ್ ಸಾಕ್ಷಿದಾರರ ಪರಿಶೀಲನೆಯ ಸಂದರ್ಭ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಗಲಭೆಯಲ್ಲಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹೆಡ್ ಕಾನ್ ಸ್ಟೇಬಲ್ ಒಬ್ಬರು ಆರೋಪಿ ಗಲಭೆಕೋರರಾದ ವಿಕಾಸ್ ಕಶ್ಯಪ್, ಗೋಲು ಕಶ್ಯಪ್, ಹಾಗೂ ರಿಂಕು ಸಬ್ಝಿವಾಲಾ ಅವರನ್ನು ಗುರುತಿಸಿರುವುದಾಗಿ ಹೇಳಿದ್ದಾರೆ. ಅವರನ್ನು ಪ್ರಾಸಿಕ್ಯೂಶನ್ ಸಾಕ್ಷಿಗಳಲ್ಲಿ ಒಬ್ಬರೆಂದು ಗುರುತಿಸಲಾಗಿದೆ.

‘‘ನಾನು 2019ರವರೆಗೆ ಸಂಬಂಧಿತ ಪ್ರದೇಶದಲ್ಲಿ ಪಹರೆ ಅಧಿಕಾರಿ (ಬೀಟ್ ಆಫೀಸರ್)ಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆರೋಪಿಗಳಾದ ವಿಕಾಸ್ ಕಶ್ಯಪ್, ಗೋಲು ಕಶ್ಯಪ್ ಹಾಗೂ ರಿಂಕು ಸಬ್ಜಿವಾಲಾ ಈ ನಾಲ್ವರ ಮುಖ ಪರಿಚಯ ದಿಲ್ಲಿ ಗಲಭೆಗೆ ಮುನ್ನವೇ ನನಗೆ ಇತ್ತೆಂದು ಕಾನ್ಸ್ಟೇಬಲ್ ನ್ಯಾಯಾಲಯಕ್ಕೆ ತಿಳಿಸಿದರು.

ಗಲಭೆ ನಡೆದ ಸ್ಥಳದಲ್ಲಿ ಆರೋಪಿಗಳು ಸ್ಥಳದಲ್ಲಿ ಇದ್ದುದನ್ನು ಹಾಗೂ ಅವರನ್ನು ಅವರವರ ಹೆಸರು ಮತ್ತು ಉದ್ಯೋಗಗಳಿಂದ ಪೊಲೀಸ್ ಕಾನ್ಸ್ಟೇಬಲ್ ಗುರುತಿಸಿದ್ದನ್ನು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಗಮನಕ್ಕೆ ತೆಗೆದುಕೊಂಡರು.

ಇದಕ್ಕೆ ವ್ಯತಿರಿಕ್ತವಾಗಿ ಇನ್ನೋರ್ವ ಪ್ರಾಸಿಕ್ಯೂಶನ್ ಸಾಕ್ಷಿದಾರರಾದ, ಸಹಾಯಕ ಸಬ್ ಇನ್ಸ್ಪೆಕ್ಟರ್ ಹೆಡ್ ಕಾನ್ ಸ್ಟೇಬಲ್ ಹೆಸರಿಸಿದ್ದ ಆರೋಪಿಗಳ ಪೈಕಿ ಮೂವರನ್ನು ತನಗೆ ಗುರುತಿಸಲು ಸಾಧ್ಯವಾಗಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದರು.

 

‘ಪ್ರಕರಣದ ಉಳಿದ ಮೂವರು ಆರೋಪಿಗಳಿಗಾಗಿ ನಾನು ಹುಡುಕಾಡಿದ್ದೆ. ಆದರೆ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ’’ ಎಂದು ಎಎಸ್ಐ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಈ ಮಧ್ಯೆ ಪ್ರಕರಣದ ತನಿಖಾಧಿಕಾರಿ (ಐಓ) ಅವರು ಹೇಳಿಕೆ ನೀಡಿ,ಈ ಮೂವರು ಆರೋಪಿಗಳ ಹೆಸರು ದಾಖಲೆಗಳಲ್ಲಿ ಇದ್ದರೂ ಅವರು ಗಲಭೆಯಲ್ಲಿ ಶಾಮೀಲಾಗಿದ್ದಾರೆಂಬುದನ್ನು ದೃಢಪಡಿಸುವ ಯಾವುದೇ ಪುರಾವೆಗಳು ಇಲ್ಲವೆಂದು ತಿಳಿಸಿದರು.

ಇದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಧೀಶರು ‘‘ಆರೋಪಿ ವ್ಯಕ್ತಿಗಳ ಗುರುತುಗಳನ್ನು ತನಿಖೆಯ ಸಂದರ್ಭ ದೃಢಪಡಿಸಲು ಸಾಧ್ಯವಾಗಿಲ್ಲವೆಂದು ತನಿಖಾಧಿಕಾರಿ ಹೇಳಿದ್ದಾರೆ. ಆರೋಪಿ ವ್ಯಕ್ತಿಗಳನ್ನು ಬಂಧಿಸಲು ತನಿಖಾಧಿಕಾರಿ ಯಾವುದೇ ಪ್ರಯತ್ನಗಳನ್ನು ಮಾಡಿರುವ ಬಗ್ಗೆ ಯಾವುದೇ ಪ್ರಯತ್ನಗಳು ನಡೆದಿದೆಯೆಂಬುದಕ್ಕೆ ಯಾವುದೇ ದಾಖಲೆಗಳು ದೊರೆತಿಲ್ಲ. ಇಬ್ಬರಲ್ಲಿ ಓರ್ವ ಪೊಲೀಸ್ ಸಾಕ್ಷಿದಾರನು ಸುಳ್ಳು ಹೇಳುತ್ತಿರುವುದಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಇದು ಭಾರತೀಯ ದಂಡಸಂಹಿತೆಯ 193ನೇ ಸೆಕ್ಷನ್ ಅಡಿ ದಂಡನೀಯ ಅಪರಾಧವಾಗಿದೆ ಎಂದರು.

ಈ ಮೂವರು ಆರೋಪಿಗಳನ್ನು ದಿಲ್ಲಿ ಗಲಭೆಗೆ ಸಂಬಂಧಿಸಿದ ಇನ್ನೊಂದು ಪ್ರಕರಣದ ಎಫ್ಐಆರ್ನಲ್ಲಿಯೂ ಹೆಸರಿಸಲಾಗಿದೆ. ಅದರಲ್ಲೂ ಅವರನ್ನು ತನಿಖೆಗೊಳಪಡಿಸಿಲ್ಲವೆಂದು  ಪ್ರತಿವಾದಿ ವಕೀಲರು ನಾಯಾಲದ ಗಮನಕ್ಕೆ ತಂದರು. ಪ್ರಾಸಿಕ್ಯೂಶನ್ ಪುರಾವೆಯನ್ನು ದಾಖಲಿಸುವ ಕಾರ್ಯವನ್ನು ನ್ಯಾಯಾಲಯ ಪೂರ್ಣಗೊಳಿಸಿದ್ದು, ಆರೋಪಿಗಳ ಹೇಳಿಕೆಯನ್ನು ಅಕ್ಟೋಬರ್ 30ರಂದು ದಾಖಲಿಸಲಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version