ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸಹಾಯಹಸ್ತ: ಸ್ವಂತ ಕಟ್ಟಡದಲ್ಲಿ ಉಚಿತ ಕೋವಿಡ್ ಆಸ್ಪತ್ರೆ

 

ತುಮಕೂರು

ತುಮಕೂರು ನಗರದ ಹಿರಿಯ ಕಾಂಗ್ರೆಸ್ ಮುಖಂಡರೂ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರೂ ಆದ ಇಕ್ಬಾಲ್ ಅಹಮದ್ ಅವರು ಕೋವಿಡ್ ನ ಈ ಸಂಕಷ್ಟದ ಕಾಲದಲ್ಲಿ ತುಮಕೂರು ನಗರದ ಜನತೆಗೆ ಮತ್ತೊಮ್ಮೆ ಸಹಾಯಹಸ್ತ ಚಾಚಿದ್ದು, ತಮ್ಮ ಸ್ವಂತ ಕಟ್ಟಡದಲ್ಲಿ ಉಚಿತ ಕೋವಿಡ್ ಆಸ್ಪತ್ರೆಯನ್ನು ಸಿದ್ಧಗೊಳಿಸಿದ್ದಾರೆ.

 

ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಉಂಟಾಗಿ, ಲಾಕ್ ಡೌನ್ ಘೋಷಣೆಯಾದಾಗ ತಮ್ಮ ಸ್ವಂತ ವೆಚ್ಚದಿಂದ ಸುಮಾರು ಎಂಟು ಸಾವಿರ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ವಿತರಿಸಿದ್ದರು. ನಂತರದಲ್ಲಿ ಮೃತರ ಅಂತ್ಯಸಂಸ್ಕಾರದ ಸಂದರ್ಭಕ್ಕೆ ಅನುಕೂಲವಾಗುವಂತೆ ಪಿ.ಪಿ.ಇ. ಕಿಟ್ ಗಳನ್ನು ವಿತರಿಸಿದ್ದರು. ಬಳಿಕ ತಮ್ಮ ಸ್ವಂತ ಕಟ್ಟಡದಲ್ಲಿ ಜಿಲ್ಲಾಡಳಿತದ ಸಹಕಾರದಿಂದ ಫೀವರ್ ಕ್ಲೀನಿಕ್ ಆರಂಭಿಸಿ, ಸುಮಾರು ನಾಲ್ಕು ಸಾವಿರ ಜನರ ತಪಾಸಣೆಗೆ ವ್ಯವಸ್ಥೆ ಮಾಡಿದ್ದರು. ಈ ವರ್ಷ ಕೋವಿಡ್ ನ ಎರಡನೇ ಅಲೆ ತಲೆಯೆತ್ತಿ ತುಮಕೂರು ನಗರವೂ ಕೋವಿಡ್ ನಿಂದ ತತ್ತರಿಸುವಂತೆ ಆಗಿದ್ದು, ಇಕ್ಬಾಲ್ ಅಹಮದ್ ರವರು ಮತ್ತೊಮ್ಮೆ ದೊಡ್ಡ ರೀತಿಯ ನೆರವಿಗೆ ಮುಂದಾಗಿದ್ದಾರೆ.

50 ಬೆಡ್ ಗಳ ಆಸ್ಪತ್ರೆ

ಈ ಬಾರಿ ಲೈಕ್ ಮೈಂಡೆಡ್ ಆರ್ಗನೈಸೇಷನ್ ಫೆÇೀರಂ ಎಂಬ ಸಂಸ್ಥೆ ರಚಿಸಿಕೊಂಡು ಉಚಿತ ಕೋವಿಡ್ ಆಸ್ಪತ್ರೆ ಯನ್ನು ತುಮಕೂರು ನಗರದ ರಿಂಗ್ ರಸ್ತೆಯ ವೀರಸಾಗರ ಬಳಿ ಸಜ್ಜುಗೊಳಿಸಿದ್ದಾರೆ. ಇದಕ್ಕೆ ಸಲಾಂ ಆಸ್ಪತ್ರೆ ಎಂದು ಹೆಸರಿಡಲಾಗಿದ್ದು, ಇಲ್ಲಿ 50 ಬೆಡ್ ಗಳಿರುತ್ತವೆ. ಇದರಲ್ಲಿ 25 ಬೆಡ್ ಗಳಿಗೆ ಆಕ್ಸಿಜನ್ ಸೌಲಭ್ಯವಿರುತ್ತದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಇದು ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿ ಸಹಾಯವಾಣಿ ವ್ಯವಸ್ಥೆ ಮಾಡಿದ್ದು ಮೊಬೈಲ್ ಸಂಖ್ಯೆಗಳಾದ 7795263312 ಅಥವಾ 7795293312 ಸಂಪರ್ಕಿಸಬಹುದಾಗಿದೆ.

 

ಕೋವಿಡ್ ಸೋಂಕಿನ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಹೋಗುವ ಅನಿವಾರ್ಯತೆಯನ್ನು ಕಡಿಮೆ ಮಾಡಿ ಜನರನ್ನು ರಕ್ಷಿಸಬೇಕೆಂಬ ಆಶಯ ನಮ್ಮದಾಗಿದೆ. ಅದರಂತೆ ಸಾಧಾರಣ (ಮೈಲ್ಡ್) ಮತ್ತು ಮಧ್ಯಮ ಹಂತದ (ಮಾಡರೇಟ್) ರೋಗಿಗಳನ್ನು ಇಲ್ಲಿ ಪರೀಕ್ಷಿಸಿ ಔಷಧೋಪಚಾರ ಒದಗಿಸುತ್ತೇವೆ. ಬೇಕಿದ್ದರೆ ಆಕ್ಸಿಜನ್ ಸಹಾ ನೀಡುತ್ತೇವೆ. ಸಾಧಾರಣ ಪ್ರಕರಣವಾಗಿದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆಯುವಂತೆ ಧೈರ್ಯತುಂಬಿ ಮಾರ್ಗದರ್ಶನ ನೀಡಿ ಕಳಿಸುತ್ತೇವೆ. ಅವರ ಫೆÇೀನ್ ನಂಬರ್ ದಾಖಲಿಸಿಕೊಂಡು, ಅವರ ಯೋಗಕ್ಷೇಮವನ್ನು ನಿರಂತರ ವಿಚಾರಿಸುತ್ತೇವೆ. ಒಂದು ವೇಳೆ ರೋಗಿ ಗಂಭೀರ ಸ್ಥಿತಿಯಲ್ಲಿರುವುದು ಖಾತ್ರಿಯಾದರೆ, ಅವರಿಗೆ ಆಕ್ಸಿಜನ್ ಒದಗಿಸಿ, ಜಿಲ್ಲಾ ಆಸ್ಪತ್ರೆಗೆ ರವಾನಿಸುವವರೆಗೂ ಇಲ್ಲೇ ಆರೈಕೆ ಮಾಡಲಾಗುವುದು. ಇದರಿಂದ ಅಗತ್ಯವಿದ್ದವರು ಮಾತ್ರ ಆಸ್ಪತ್ರೆಗೆ ದಾಖಲಾಗಬಹುದು. ಮಿಕ್ಕವರು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಇದರಿಂದ ರೋಗಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಆಗಬಹುದಾದ ಒತ್ತಡವೂ ಕಡಿಮೆಯಾಗುತ್ತದೆ. ಎಂದು ಇಕ್ಬಾಲ್ ಅಹಮದ್ ರವರು ಅಭಿಪ್ರಾಯಪಟ್ಟಿದ್ದಾರೆ

 

ವೈದ್ಯರು, ಸ್ವಯಂಸೇವಕರ ತಂಡ.

ತುಮಕೂರಿನ ಹೆಸರಾಂತ ವೈದ್ಯರಾದ ಡಾ. ಇಂತಿಯಾಜ್, ಡಾ. ಮುದಸೀರ್, ಡಾ. ಅಸ್ಗರ್ ಬೇಗ್, ಡಾ. ಇಮ್ರಾನ್ ಮತ್ತು ಡಾ. ಅಮೀನ್ ಒಬೇದ್ ರವರು ಈ ಮಹಾನ್ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇಲ್ಲಿ ನಾಲ್ವರು ನರ್ಸ್ ಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ತರಬೇತಿ ಪಡೆದುಕೊಂಡು ಕಳೆದ ವರ್ಷದಿಂದಲೂ ಫೀವರ್ ಕ್ಲೀನಿಕ್ ನಲ್ಲಿ ಸೇವೆ ಸಲ್ಲಿಸುತ್ತಿರುವ 15 ಜನ ಸ್ವಯಂಸೇವಕರ ತಂಡವೂ ಇಲ್ಲಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

 

ದಾನಿಗಳ ನೆರವು

ನಮ್ಮ ಈ ಮಾನವ ಸೇವೆಯ ಕಾರ್ಯಕ್ಕೆ ತುಮಕೂರಿನ ದಾನಿಗಳಾದ ಕೈಗಾರಿಕೋದ್ಯಮಿ ಅಬ್ಹುಲ್ ಹಫೀಜ್, ವರ್ತಕ ಮುದಸೀರ್ ಅಹಮದ್ ರೂಬಿ, ಜಮಾತ್ ಮುಖ್ಯಸ್ಥರಾದ ಮಹಮದ್ ಆಸಿಫ್, ಮುಕರಂ ಸೈಯಿದ್ ರವರು ಮುಕ್ತಮನಸ್ಸಿನಿಂದ ನೆರವು ನೀಡುತ್ತಿದ್ದಾರೆಂದು ಇಕ್ಬಾಲ್ ಅಹಮದ್ ರವರು ಅಭಿಮಾನದಿಂದ ತಿಳಿಸಿದರು.

 

ಈ ನಮ್ಮ ಉಚಿತ ಆಸ್ಪತ್ರೆಗೆ ಸರ್ಕಾರದಿಂದ ಆಕ್ಸಿಜನ್ ಸೌಲಭ್ಯವನ್ನು ಹಾಗೂ ರಾತ್ರಿ ಪಾಳಿಯಲ್ಲಿ ಇಬ್ಬರು ಸರ್ಕಾರಿ ವೈದ್ಯರ ಸೇವೆ ಒದಗಿಸುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಜಿಲ್ಲಾಡಳಿತವು ಇದಕ್ಕೆ ಸ್ಪಂದಿಸಿದರೆ ನಮ್ಮ ಆಸ್ಪತ್ರೆಯ ಸೇವೆಯು 24/7 ಆಗಿ ಲಭಿಸಲಿದೆ ಎಂದು ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version