ಸೇನಾ ಕಾರ್ಯಾಚರಣೆಯಲ್ಲಿ ನೆರವಾದ 50 ಸಾವಿರ ಅಫ್ಘನ್ನರಿಗೆ ಅಮೆರಿಕದಲ್ಲಿ ಆಶ್ರಯ
ವಾಶಿಂಗ್ಟನ್, ಸೆ.4: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ವಶವಾದ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಅಮೆರಿಕನ್ ಪಡೆಗಳ ಕಾರ್ಯಾಚರಣೆಗೆ ಸಹಕರಿಸಿದ ಅಫ್ಘಾನ್ ಪ್ರಜೆಗಳಿಗೆ ನೆರವಾಗುವ ತನ್ನ ಬದ್ಧತೆಯ ಭಾಗವಾಗಿ ಕನಿಷ್ಠ 50 ಸಾವಿರ ಮಂದಿ ಅಫ್ಘನ್ನರಿಗೆ ಅಮೆರಿಕವು ಆಶ್ರಯ ನೀಡುವ ನಿರೀಕ್ಷೆಯಿದೆಯೆಂದು ಆಂತರಿಕ ಭದ್ರತಾ ಕಾರ್ಯದರ್ಶಿ ಅಲೆಜಾಂಡ್ರೊ ಮೇಯರ್ಕಾಸ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳಿಗೆ ನೆರವಾಗಿದ್ದ ಸಾವಿರಾರು ಅಫ್ಘನ್ನರು ಈಗಾಗಲೇ ಅಮೆರಿಕಕ್ಕೆ ಆಗಮಿಸಿದ್ದು , ಅವರಿಗೆ ಪುನರ್ವಸತಿಯನ್ನು ಒದಗಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನೂ ಎಷ್ಟು ಜನ ಬರಲಿದ್ದಾರೆ ಹಾಗೂ ಅದಕ್ಕೆ ಎಷ್ಟು ಸಮಯ ತಗಲುವುದು ಎಂಬುದು ಪ್ರಶ್ನೆಯಾಗಿದೆ ಎಂದವರು ಹೇಳಿದರು.
‘‘ನಮ್ಮ ಬದ್ಧತೆಯು ಸಹಿಷ್ಣುತೆಯಿಂದ ಕೂಡಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಲೆಜಾಂಡ್ರೊ ಅವರು, ‘‘ ಇದು ಕೇವಲ ಮುಂದಿನ ಹಲವಾರು ವಾರಗಳವರೆಗಿನ ವಿಷಯವಲ್ಲ. ನಮ್ಮ ಕಟ್ಟಕಡೆಯ ಗುರಿಯನ್ನು ಪೂರ್ಣಗೊಳಿಸುವವರೆಗೆ ನಾವು ವಿರಮಿಸಲಾರೆವು’’ ಎಂದು ಮೇಯರ್ಕಾಸ್ ತಿಳಿಸಿದರು.