ತುಮಕೂರು ನಗರದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಭ್ರಷ್ಠ ಪೂರಿತ ಮತ್ತು ಕಳಪೆ ಗುಣಮಟ್ಟದ್ದಾಗಿದೆ : ಮಾಜಿ ಸಚಿವ ಸೊಗಡು ಶಿವಣ್ಣ
ತುಮಕೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೊಗಡು ಶಿವಣ್ಣರವರು. ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಾಗಿದ್ದು ಇದರಿಂದ ಸಾರ್ವಜನಿಕರು ತೀವ್ರ ರೋಸಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಭಾರೀ ಅನಾನುಕೂಲಗಳೇ ಹೆಚ್ಚಾಗಿದ್ದು, ಈ ಕಾಮಗಾರಿಗಳಲ್ಲಿ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಬಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು ಪಾಲಿಕೆಯ ಆಯುಕ್ತರಿಂದ ಹಿಡಿದು ಎಲ್ಲಾ ಪಾಲಿಕೆಯ ಭಾಗಶಃ ಎಲ್ಲಾ ಅಧಿಕಾರಿಗಳು ರಾಜಾರೋಷವಾಗಿ ಅಮೇಥ್ಯಕ್ಕೆ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಅಗ್ರ ಪಾಲು ತುಮಕೂರು ಪಾಲಿಕೆಯ ಕಮಿಷನರ್ ರೇಣುಕಾ ರವರಿಗೆ ಸಲ್ಲುತ್ತದೆ ಎಂದರು. ಖಾತೆ ಮಾಡಿಕೊಡುವ, ಕಟ್ಟಡ ಲೈಸೆನ್ಸ್, ಸಿಸಿ ಕ್ಯಾಮೆರಾ, ಸೋಲಾರ್ ಲೈಟ್, ವಿದ್ಯುತ್ ಕಂಬ, ವಿದ್ಯುತ್ ಸಾಮಗ್ರಿಗಳು, ಚರಂಡಿ, ರಸ್ತೆ, ಸ್ಲಾಬ್ ಹೀಗೆ ಎಲ್ಲಾ ಹಂತದಲ್ಲೂ ಪಾಲಿಕೆ ಆಯುಕ್ತರ ಲಂಚಾವತಾರ ಎಗ್ಗಿಲ್ಲದೆ ಸಾಗುತ್ತಿದೆ ಎಂದರು, ಹಾಗೆಯೇ ತುಮಕೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರು ತಾವು ಸಲ್ಲಿಸುವ ಅರ್ಜಿಗಳಿಗೆ ಯಾವುದೇ ತರಹದ ಚೆಕ್ ಲಿಸ್ಟ್ ನೀಡದೆ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇನ್ನು ಆರ್.ಟಿ.ಐ. ಅಡಿಯಲ್ಲಿ ಮಾಹಿತಿ ಕೇಳಿದರೆ ಅದಕ್ಕೆ ಇಲ್ಲಿ ಯಾವುದೇ ತರಹದ ಮಾಹಿತಿ ಮತ್ತು ಹಿಂಬರಹ ನೀಡದೇ ವಿನಾಃಕಾರಣ ಅರ್ಜಿಗಳನ್ನು ಮುಲ್ಕಿಯಲ್ಲಿಟ್ಟು ಬೇಜವಾಬ್ದಾರಿತನ ಮಾಡುತ್ತಿದ್ದಾರೆಂದರು.
ಕಾಮಗಾರಿಗಳು, ಕೆಲಸ ಕಾರ್ಯಗಳು, ಮಾಹಿತಿ, ಇನ್ನಿತರೆ ವಿಚಾರಗಳ ಕುರಿತು ಅಧಿಕಾರಿಗಳಿಗೆ ತಾವು ಸಲ್ಲಿಸುವ ಅರ್ಜಿಗೆ ಚೆಕ್ ಲಿಸ್ಟ್ ನೀಡುತ್ತಿಲ್ಲ ಎಂದು ಕೇಳಿದರೆ ಅವರು ಆಯುಕ್ತರ ಕಡೆ ಬೊಟ್ಟು ಮಾಡುವ ಸಿಬ್ಬಂದಿ ತಮಗೇನು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತುಮಕೂರು ಮಹಾನಗರಪಾಲಿಕೆಯ ಆಯುಕ್ತರಾದ ರೇಣುಕಾ ರವರು ಸಾರ್ವಜನಿಕರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ವಿಚಾರಿಸಲು ತೆರಳಿದರೆ ತಾವು ಲಕ್ಷಾಂತರ ರೂಗಳ ಹಣವನ್ನು ನೀಡಿ ಈ ಸ್ಥಾನಕ್ಕೆ ಬಂದಿರುವುದಾಗಿಯೂ, ತಾವು ಮಾಡುವ ಕೆಲಸಕ್ಕೆ ಇಂತಿಷ್ಟು ತಲುಪಿಸಿದರೆ ತಮ್ಮಗಳ ಕೆಲಸ ಸುಗಮವಾಗಿ ಸಾಗುತ್ತದೆಂದು ಸಾರ್ವಜನಿಕರಿಗೆ ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಜಿ ಸಚಿವ ಶಿವಣ್ಣರವರು ಮಾಡಿದ್ದಾರೆ.
ಇನ್ನು ತುಮಕೂರು ನಗರದ ಬಾರ್ ಲೈನ್ ರಸ್ತೆ, ರಿಂಗ್ ರಸ್ತೆ, ಶಿರಾಗೇಟ್ ರಸ್ತೆ ನಿರ್ಮಾಣ ಸೇರಿದಂತೆ ತುಮಕೂರು ನಗರದಲ್ಲಿ ಹಾಲಿ ನಿರ್ವಹಿಸಿರುವ ಎಲ್ಲಾ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿ ವರ್ಗದಿಂದ ಹಿಡಿದು ಎಲ್ಲರಿಗೂ ಕಮಿಷನ್ ಸೇರುತ್ತಿದೆ ಎಂದರು.
ಇದರ ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ಹಾಲಿ ನಡೆಯುತ್ತಿರುವ ಭಾಗಶಃ ಕಾಮಗಾರಿಗಳು ಆಕ್ರಮದಿಂದ ಕೂಡಿದ್ದು ಯಾರು ಕೂಡ ಧ್ವನಿಯೆತ್ತದ ಹಾಗೆ ಎಲ್ಲರನ್ನೂ ದಮನಿಸುವ ಪ್ರಯತ್ನ ನಡೆಯುತ್ತಿದ್ದು. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಸತ್ಯಾಗ್ರಹ ಮಾಡುವ ಮೂಲಕ ಪಾಲಿಕೆ ಅಧಿಕಾರಿಗಳ ಕರ್ಮಕಾಂಡಗಳನ್ನು ಹೊರಗೆ ತೆಗೆಯಲಾಗುವುದು ಎಂದರು. ಈ ಕುರಿತು ತಾವು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ಧರಿದ್ದು ಇಂದಿನಿಂದಲೇ ದಾಖಲಾತಿಗಳ ಕ್ರೋಡೀಕರಣ ಮಾಡಲಾಗುತ್ತದೆ. ಹಾಗೂ ಜನಾಂದೋಲನದ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.