ಪ್ರಧಾನಿ ನರೇಂದ್ರ ಮೋದಿಯವರಿಂದ ‘ಇತಿಹಾಸ ತಿರುಚುವ ಹತಾಶ ಪ್ರಯತ್ನ’:ಪಿ. ಚಿದಂಬರಂ
ಹೊಸದಿಲ್ಲಿ: ಜವಾಹರಲಾಲ್ ನೆಹರೂ ಅವರ ಕಾರಣದಿಂದಾಗಿ ಗೋವಾ ವಿಮೋಚನೆ ವಿಳಂಬವಾಯಿತು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಯು ‘ಇತಿಹಾಸವನ್ನು ತಿರುಚುವ ಹತಾಶ ಪ್ರಯತ್ನ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಶುಕ್ರವಾರ ಹೇಳಿದ್ದಾರೆ.
ಗೋವಾವನ್ನು ಮುಕ್ತಗೊಳಿಸಲು ಭಾರತದ ಮೊದಲ ಪ್ರಧಾನಿ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದ್ದರು ಎಂದು ಚಿದಂಬರಂ ಪ್ರತಿಪಾದಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾದ ಯಾವುದೇ ಕಾಂಗ್ರೆಸ್ ಶಾಸಕರನ್ನು ಈ ಬಾರಿ ಗೋವಾದಲ್ಲಿ ಬಿಜೆಪಿಯಿಂದ ಬೇಟೆಯಾಡಲು ಸಾಧ್ಯವಿಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಚಿದಂಬರಂ ಅವರು ಒತ್ತಿ ಹೇಳಿದರು.
“ನಮ್ಮ ಮನೆಗೆ ಉತ್ತಮ ಕಾವಲು ಇದೆ” ಹಾಗೂ “ಕಳ್ಳ” ಇನ್ನೂ ಹೊರಗಿದ್ದಾನೆ. ಜನರು “ಅವನಿಗೆ ಪಾಠ ಕಲಿಸುತ್ತಾರೆ” ಎಂದು ಅವರು ಹೇಳಿದರು.
ಪ್ರತಿ ದಿನ ಕಳೆದಂತೆ ಮತದಾರರಿಗೆ ಬಿಜೆಪಿ ಅಥವಾ ಕಾಂಗ್ರೆಸ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು ಎಂಬುದು ಸ್ಪಷ್ಟವಾಗುತ್ತಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಂತಹ “ಸಣ್ಣ ಪಕ್ಷಗಳಿಂದ” ಬಿಜೆಪಿಯೇತರ ಮತಗಳು ವಿಭಜನೆಯಾಗುತ್ತಿವೆ ಎಂದು ಅವರು ಹೇಳಿದರು.
ನೆಹರೂ ಅವರಿಂದಾಗಿ ಗೋವಾ ವಿಮೋಚನೆ ವಿಳಂಬವಾಯಿತು ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಇದು ಇತಿಹಾಸವನ್ನು ತಿರುಚುವ ಹಾಗೂ ಮರು ಬರೆಯುವ ಮತ್ತೊಂದು ಹತಾಶ ಪ್ರಯತ್ನವಾಗಿದೆ ಎಂದು ಹೇಳಿದರು.
” ಮೋದಿ ಹಾಗೂ ಶಾ ಅವರಿಗೆ ಎರಡನೇ ಮಹಾಯುದ್ಧದ ನಂತರದ ಪ್ರಪಂಚದ ಇತಿಹಾಸ ತಿಳಿದಿಲ್ಲ. ಅವರಿಗೆ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ತಿಳಿದಿಲ್ಲ, ವಿಶೇಷವಾಗಿ 1947-1960 ರ ಆರಂಭದ ವರ್ಷಗಳ ಇತಿಹಾಸ ಗೊತ್ತಿಲ್ಲ. ಭಾರತವು ಶಾಂತಿಯ ಚಾಂಪಿಯನ್ ಮತ್ತು ಅಲಿಪ್ತ ಚಳವಳಿಯ ಮಾನ್ಯತೆ ಪಡೆದ ನಾಯಕನಾಗಿ ಹೊರಹೊಮ್ಮಿದ್ದು, ಜವಾಹರಲಾಲ್ ನೆಹರು ಅವರು ಭಾರತವನ್ನು ಎಷ್ಟು ಕುಶಲವಾಗಿ ಮುನ್ನಡೆಸಿದ್ದರು ಎಂದು ಅವರಿಗೆ ತಿಳಿದಿಲ್ಲ’’ ಎಂದು ಚಿದಂಬರಂ ಹೇಳಿದರು.