ಬಾಗೂರು ನವಿಲೆಯಿಂದ ಹೇಮಾವತಿ ನೀರು ಬಿಡುಗಡೆ: ಸೊಗಡು ಶಿವಣ್ಣ ಪ್ರತಿಭಟನೆಗೆ ಫಲ
ದೇಶದ ಅತ್ಯಂತ ಉದ್ದವಾದ ನೀರಾವರಿ ಸುರಂಗ ಎಂದೇ ಖ್ಯಾತಿ ಪಡೆದಿರುವ ಬಾಗೂರು-ನವಿಲೆ ಸುರಂಗದಿಂದ ತುಮಕೂರಿಗೆ ಸೋಮವಾರ ಹೇಮಾವತಿ ನೀರು ಬಿಡುಗಡೆ ಮಾಡಿದ್ದು, ಮಾಜಿ ಸಚಿವ ಸೊಗಡು ಶಿವಣ್ಣನವರ ಪ್ರತಿಭಟನೆಗೆ ಫಲ ಸಿಕ್ಕಂತಾಗಿದೆ.
ತುಮಕೂರು ಜಿಲ್ಲೆಗೆ ಕುಡಿಯುವ ಹಾಗೂ ನೀರಾವರಿ ಯೋಜನೆಗಳಿಗಾಗಿ ಹೇಮಾವತಿ ನೀರು ಹಂಚಿಕೆಯಾಗಿದ್ದು, ಗೊರೂರು ಜಲಾಶಯದಲ್ಲಿ ಅಧಿಕ ನೀರು ಸಂಗ್ರಹವಾಗಿದ್ದು, ತುಮಕೂರು ಜಿಲ್ಲೆಗೆ ಬರಬೇಕಾದ ನೀರನ್ನು ಬಿಡುಗಡೆಮಾಡಬೇಕೆಂದು ಆಗ್ರಹಿಸಿ ಹೇಮಾವತಿ ನಾಲೆಯ 77ನೇ ಕಿ.ಮೀ.ಬಳಿಮಾಜಿ ಸಚಿವ ಸೊಗಡು ಶಿವಣ್ಣ ಕಳೆದ ಮೂರುದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದರು. ಪ್ರತಿಭಟನೆಯ ಫಲವಾಗಿ ಇದೀಗ ಹೇಮಾವತಿ ನಾಲಾವಲಯದ ಅಧಿಕಾರಿಗಳು ಬಾಗೂರು ನವಿಲೆಯಿಂದ ನೀರನ್ನು ಹೊರಬಿಟ್ಟಿದ್ದು, ಸ್ವತಃ ಸೊಗಡು ಶಿವಣ್ಣ ನೀರನ್ನು ಹೊರಬಿಟ್ಟಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸೊಗಡು ಶಿವಣ್ಣ, ನಮ್ಮ ಪಾಲಿನ ನೀರು ಪಡೆಯಲು ಸತ್ಯಾಗ್ರಹ ಅನಿವಾರ್ಯವಾಯಿತು. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡನೀಯವಾದದ್ದು. ಸಮರ್ಪಕವಾಗಿ ನೀರು ಹರಿಯಬೇಕೆಂಬುದು ನನ್ನ ಆಗ್ರಹವಾಗಿದ್ದು ತುಮಕೂರಿಗೆ ಮರಳಿದ ನಂತರ ಪತ್ರಿಕಾಗೋಷ್ಟಿ ನಡೆಸಿ ನೀರಾವರಿ ಯೋಜನೆ ತೊಡಕು ಹಾಗೂ ಸಮಸ್ಯೆಗಳ ಬಗ್ಗೆ ಸವಿವರವಾದ ಮಾಹಿತಿ ನೀಡುವೆ ಎಂದರು.
ಏನಿದು ಬಾಗೂರು ನವಿಲೆ…
ಬಾಗೂರು ನವಿಲೆ ಸುರಂಗ ,ಭಾರತ ದೇಶದ ಉದ್ದದ ನೀರಾವರಿ ಸುರಂಗ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಮತ್ತು ನವಿಲೇ ಊರುಗಳ ನಡುವೆ ಇರುವುದರಿಂದ ಅದೇ ಹೆಸರಿನಿಂದ ಇದು ಪ್ರಸಿದ್ದಿ ಪಡೆದಿದೆ.
9.7 ಕಿಮಿ ಉದ್ದವಿರುವ, ಈ ನಾಲೆ 175 ರಿಂದ 200ಅಡಿ ಭೂಮಿ ಅಡಿಯಲ್ಲಿ ಇದು ಸಾಗಿದೆ. ಹೇಮಾವತಿ ಕಣಿವೆಯಿಂದ ಶಿಂಶ ಕಣಿವೆಗೆ ನೀರನ್ನು ಹರಿಸಲು ಇದು ಸಹಾಯಕಾರಿ. ತುಮಕೂರು ಜಿಲ್ಲೆಯ ಕುಣಿಗಲ್ , ತುರುವೇಕೆರೆ,ಶಿರಾ ಪಟ್ಟಣಗಳ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಇದನ್ನು ಬಳಸುವರು.