ಜಿಲ್ಲಾ ಮಟ್ಟದ ಅಧಿಕಾರಿಗಳ ಗೈರು: ಚಳಿ ಬಿಡಿಸಿದ ಕೇಂದ್ರ ಸಚಿವ ವಿ.ಸೋಮಣ್ಣ .
ತುಮಕೂರು–ತುಮಕೂರು ಜಿಲ್ಲೆಗೆ ಮೊದಲ ಭಾರಿಗೆ ಆಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಡಿಸಿ,ಸಿಇಒ ಹಾಗೂ ಇತರೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಕೇಂದ್ರ ಸಚಿವ ವಿ.ಸೋಮಣ್ಣ ವಿಚಾರಿಸಿದರು.ಈ ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ತಕ್ಷಣ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಫೋನ್ ಮಾಡಿದ ಸಚಿವ ಸೋಮಣ್ಣ ಅವರು, ಕೇಂದ್ರ ಸರ್ಕಾರಕ್ಕೂ ನಿಮಗೂ ಸಂಬಂಧವಿಲ್ಲವೇ? ಫೋನ್ ಮಾಡಿ ಆಸ್ಪತ್ರೆಗೆ ಬರುತ್ತೇನೆ ಎಂದು ಹೇಳಿದರು, ನೀವು ಬಂದಿಲ್ಲ, ನಾನು ವರದಿ ಮಾಡಿದರೆ ಏನಾಗುತ್ತೇ ಗೊತ್ತಿಲ್ಲವೇ? ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಬಂದಿಲ್ಲ ಎಂದು ಹರಿಹಾಯ್ದರು.
ಜಿಲ್ಲಾಧಿಕಾರಿಗಳು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಕೊರಟಗೆರೆಯಲ್ಲಿ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರೆ, ನಾನು ಸಚಿವನಲ್ಲವೇ? ಕೊರಟಗೆರೆಯಲ್ಲಿ ಗಿಡ ನೆಡುವುದು ಮುಖ್ಯವೋ, ಇಲ್ಲಿ ಜನರ ಪ್ರಾಣ ಕಾಪಾಡುವುದು ಮುಖ್ಯವೋ, ಡಿಎಚ್‌ಒ, ಡಿಎಸ್ ಇಬ್ಬರನ್ನು ಬಿಟ್ಟರೆ ಬೇರೆ ಯಾರು ಇಲ್ಲ, ಇವರು ನೀರು ಕೊಡುತ್ತಾರೆಯೇ? ಆರ್ ಡಿಪಿಆರ್ ಅಧಿಕಾರಿಗಳು ಎಲ್ಲಿದ್ದಾರೆ? ಇಂದು ಸಂಜೆಯೊಳಗೆ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯತಿ ಸಿಇಒ ಜಿ.ಪ್ರಭು ಅವರಿಗೆ ಫೋನ್ ಮಾಡಿ ಆಸ್ಪತ್ರೆಯಲ್ಲಿ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ, ನಿಮಗೆ ಗಿಡ ನಡೆವುದು ಮುಖ್ಯವಾಯಿತು, ಎಲ್ಲಿಂದ ಬಂದ್ದಿದ್ದೀಯಾ? ಹಿನ್ನೆಲೆ ಏನು ಎನ್ನುವುದು ಮರೆಯಬೇಡ, ಅವರೊಬ್ಬರೇ ಸಚಿವರಲ್ಲ, ನಾನು ಸಚಿವನೇ, ಫೋನ್ ಮಾಡಿ ಆಸ್ಪತ್ರೆಗೆ ಬರುತ್ತೀನಿ ಅಂದ್ರು ಯಾವ ಅಧಿಕಾರಿಗಳು ಇಲ್ಲ ಎಂದು ಗರಂ ಆದರು.
ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಚಿದಾನಂದಗೌಡ, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಸೇರಿದಂತೆ ಇತರರಿದ್ದರು