- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 3 ಸಮಿತಿಯ ಅಧ್ಯಕ್ಷತೆ ವಹಿಸಲಿದೆ ಭಾರತ
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಮೂರು ಪ್ರಮುಖ ಅಂಗಸಂಸ್ಥೆಗಳ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಭಯೋತ್ಪಾದನಾ ನಿಗ್ರಹ ಸಮಿತಿ, ತಾಲಿಬಾನ್ ನಿರ್ಬಂಧಗಳ ಸಮಿತಿ ಮತ್ತು ಲಿಬಿಯಾ ನಿರ್ಬಂಧಗಳ ಸಮಿತಿ ಅಧ್ಯಕ್ಷತೆ ವಹಿಸಲಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿಯವರು ಈ ವಿಷಯವನ್ನು ಪ್ರಕಟಿಸಿದ್ದಾರೆ.
ಭಾರತವು 2022 ರಲ್ಲಿ ಯುಎನ್‌ಎಸ್‌ಸಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದೆ. ಈ ಸಮಿತಿಯ ಅಧ್ಯಕ್ಷತೆಯು ಭಾರತಕ್ಕೆ ವಿಶೇಷವಾಗಿದೆ, ಭಾರತ ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿದೆ ಮಾತ್ರವಲ್ಲದೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ವಿಶ್ವ ವೇದಿಕೆಯಲ್ಲಿ ಖಂಡಿಸುತ್ತದೆ.
ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಅಫ್ಘಾನಿಸ್ಥಾನದ ಪ್ರಗತಿಗೆ ಭಾರತದ ಬಲವಾದ ಆಸಕ್ತಿ ಮತ್ತು ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡರೆ ತಾಲಿಬಾನ್ ನಿರ್ಬಂಧ ಸಮಿತಿಯು ಭಾರತಕ್ಕೆ ಆದ್ಯತೆಯಾಗಿದೆ ಎಂದು ತಿರುಮೂರ್ತಿ ಹೇಳಿದರು.
ಲಿಬಿಯಾ ಮತ್ತು ಶಾಂತಿ ಪ್ರಕ್ರಿಯೆಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಗಮನವಿರುವಾಗ ಭಾರತವು ನಿರ್ಣಾಯಕ ಹಂತದಲ್ಲಿ ಲಿಬಿಯಾ ನಿರ್ಬಂಧ ಸಮಿತಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳಲಿದೆ ಎಂದು ತಿರುಮೂರ್ತಿ ಹೇಳಿದರು.