ಉತ್ತರಪ್ರದೇಶ:ಅತ್ಯಾಚಾರ ದೂರಿಗೆ ಯಾವುದೇ ಕ್ರಮ ಕೈಗೊಳ್ಳದ ಪೊಲೀಸ್, ನೊಂದ ಮಹಿಳೆ ಆತ್ಮಹತ್ಯೆ
ಲಕ್ನೊ: ಅತ್ಯಾಚಾರದ ದೂರಿಗೆ ಸಂಬಂಧಿಸಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯತೆ ತೋರಿದ್ದಕ್ಕೆ ಮನನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೇ ಮಹಿಳೆ ವಿಷ ಸೇವಿಸಿದ್ದಾಳೆ ಎಂದು ಆಕೆಯ ಕುಟುಂಬದವರು ಹೇಳಿದ್ದರೆ, ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
ಆದಾಗ್ಯೂ ನಿರ್ಲಕ್ಷ್ಯದ ಕಾರಣಕ್ಕಾಗಿ ಪೋಲಿಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ ಹಾಗೂ ಈ ಘಟನೆಯು ರಾಜ್ಯದ ಬಿಜೆಪಿ ಸರಕಾರಕ್ಕೆ ಕಪಾಳಮೋಕ್ಷವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ನನ್ನ ಪತ್ನಿ ಅತ್ಯಾಚಾರಕ್ಕೊಳಗಾಗಿದ್ದಳು. ಅನಿಲ್ ಹೆಸರಿನ ಒಬ್ಬ ಆರೋಪಿಯನ್ನು ಗುರುತಿಸಲಾಗಿತ್ತು. ಆದರೆ ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದುಮಹಿಳೆಯ ಪತಿ ಹೇಳಿದ್ದಾರೆ ಎಂದು ಎಸ್ಪಿ ಸುಧೀರ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದ್ದರೂ ವ್ಯರ್ಥವಾಯಿತು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಮಹಿಳೆ ಶನಿವಾರ ಪೊಲೀಸ್ ಠಾಣೆಗೆ ಬಂದು ವಿಷ ಸೇವಿಸಿದ್ದಾಳೆ ಎಂದು ಅವರು ಹೇಳಿದ್ದಾರೆ.
ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.