ಪ್ರವರ್ಗ -1 ರ ಸಮುದಾಯದ ಮುಖಂಡರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಲು ಆಗ್ರಹಿಸಿದ ಒಕ್ಕೂಟ
ತುಮಕೂರು – ಮುಂಬರುವ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರವರ್ಗ ಒಂದರ ಸಮುದಾಯಕ್ಕೆ ಹೆಚ್ಚಿನದಾಗಿ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇನ್ನು ರಾಜ್ಯದಲ್ಲಿ ಪ್ರವರ್ಗ-1 ರ ಜಾತಿಗಳ ಒಕ್ಕೂಟ ರಾಜ್ಯದ್ಯಂತ 95ಕ್ಕೂ ಹೆಚ್ಚು ಸಮಾಜ ಹಾಗೂ 376 ಉಪ ಸಮಾಜಗಳನ್ನ ಕಟ್ಟುವ ಕೆಲಸವನ್ನು ನಮ್ಮ ಸಂಘಟನೆ ಮಾಡಿದ್ದು ಇದುವರೆಗೂ ಹಿಂದುಳಿದಿರುವ ನಮ್ಮ ಸಮುದಾಯಗಳು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂದು ಸಹ ನಮ್ಮ ಹೋರಾಟ ಮಾಡುತ್ತಾ ಬಂದಿದ್ದು ಇನ್ನಾದರೂ ರಾಜಕೀಯ ಪಕ್ಷಗಳು ಪ್ರವರ್ಗ ಒಂದರ ಸಮುದಾಯಗಳ ಏಳಿಗೆಗೆ ಶ್ರಮಿಸುವ ಸಲುವಾಗಿ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದ ಅವರು ರಾಜ್ಯದಲ್ಲಿ ಪ್ರವರ್ಗ ಒಂದಕ್ಕೆ ಸೇರಿದ 90 ಲಕ್ಷಕ್ಕೂ ಹೆಚ್ಚು ಮತದಾರರು ರಾಜ್ಯದಲ್ಲಿ ಇದ್ದು ನಮ್ಮ ಮನವಿಯನ್ನು ಮುಂದಿನ ದಿನದಲ್ಲಿ ತಿರಸ್ಕರಿಸಿದರೆ ಸ್ಪಷ್ಟ ನಿಲುವನ್ನ ಮುಂದಿನ ದಿನದಲ್ಲಿ ನಮ್ಮ ಸಮುದಾಯಗಳು ತೋರಿಸಲಿವೆ ಎಂದು ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ಇನ್ನು ತುಮಕೂರು ಜಿಲ್ಲೆಯಲ್ಲಿ ಪ್ರವರ್ಗ ಒಂದರ ಅಡಿಯಲ್ಲಿ ಬರುವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಸಾಸಲು ಸತೀಶ್ ಹಾಗೂ ಚಿಕ್ಕನಾಯಕನ ಹಳ್ಳಿಯ ರೇಣುಕಯ್ಯ ನವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನ ಒತ್ತಾಯಿಸಿದ ಅವರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲೂ ಸಹ ರಾಜ್ಯದಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ತಿಳಿಸಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಚ್ ವಿ ಬಂಡಿ, ಧನಿಯಾ ಕುಮಾರ್, ಗಂಗಪ್ಪ, ಮಂಜುನಾಥ್, ಯೋಗೇಶ್, ರಾಜೇಶ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ – ಮಾರುತಿ ಪ್ರಸಾದ್ ತುಮಕೂರು