ತುಮಕೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪ್ರಭಾವತಿ ಸುಧೀಶ್ವರ ಹಾಗೂ ರೂಪಶ್ರೀ ಇಬ್ಬರಿಗೂ ಅವಕಾಶ ನೀಡಿದ ಕಾಂಗ್ರೆಸ್
ತುಮಕೂರು: ಸೆಪ್ಟೆಂಬರ್ ೦೯ ರಂದು ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಎಸ್.ಸಿ ಮಹಿಳೆಗೆ ಮೀಸಲಾತಿ
ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷದ ಶ್ರೀಮತಿ ಪ್ರಭಾವತಿ ಹಾಗೂ ಶ್ರೀಮತಿ ರೂಪಶ್ರೀ ಶೆಟ್ಟಳಯ್ಯ ಈ ಇಬ್ಬರು ಮಹಿಳಾ ಸದಸ್ಯರಿಗೆ ಈ ಸದವಕಾಶ ಲಭಿಸಿದೆ.
ಆದ ಕಾರಣ ಪಕ್ಷದ ಮುಖಂಡರುಗಳು, ಪಕ್ಷದ ವೀಕ್ಷಕರು ಮತ್ತು ಮಹಾನಗರ ಪಾಲಿಕೆಯ ಪಕ್ಷದ ಸದಸ್ಯರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಇಬ್ಬರು ಮಹಿಳೆಯರಿಗೂ ಸಮಾನಾವಧಿಯ ಅಧಿಕಾರ ಕಲ್ಪಿಸುವಂತೆ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.
ಅದರಂತೆ ವರ್ಷದಲ್ಲಿ ಒಬ್ಬರಿಗೆ ೬ ತಿಂಗಳ ಅಧಿಕಾರಾವಧಿ ಮತ್ತೊಬ್ಬರಿಗೆ ಇನ್ನುಳಿದ ೬ ತಿಂಗಳ ಅಧಿಕಾರಾವಧಿ ನೀಡುವಂತೆ ಪಕ್ಷವು ತೀರ್ಮಾನಿಸಿದೆ. ಮೊದಲ ೬
ತಿಂಗಳ ಅವಧಿಯಲ್ಲಿ ಶ್ರೀಮತಿ ಪ್ರಭಾವತಿ ರವರಿಗೆ ಮಹಾಪೌರರನ್ನಾಗಿ ಆಯ್ಕೆ ಮಾಡಲಾಗುತ್ತದೆ. ೨೦೧೯-೨೦ ರ (ಇದೇ ಅವಧಿಯ ಎರಡೂವರೆ ವರ್ಷದ ಹಿಂದೆ)
ಅವಧಿಯಲ್ಲಿ ಉಪ ಮಹಾಪೌರರಾಗಿದ್ದ ಶ್ರೀಮತಿ ರೂಪಶ್ರೀ ಶೆಟ್ಟಳಯ್ಯ ರವರಿಗೆ ಇನ್ನುಳಿದ ೬ ತಿಂಗಳ ಅವಧಿಗೆ ಮಹಾಪೌರರನ್ನಾಗಿ ಆಯ್ಕೆ ಮಾಡುವ ಮೂಲಕ ಈ ಇಬ್ಬರು
ಮಹಿಳಾ ಸದಸ್ಯರಿಗೆ ಸಮಾನಾವಧಿಯ ಅಧಿಕಾರ ನೀಡುವಂತೆ ಪಕ್ಷದ ಮುಖಂಡರ ತೀರ್ಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ ಹಾಗೂ ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್ ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.