ಜ.26 ಕ್ಕೆ 98 ಸಾವಿರ ಟ್ರಾಕ್ಟರ್‌ಗಳು, 1.25ಕೋಟಿ ರೈತರು ದೆಹಲಿಯಲ್ಲಿ ಫೆರೇಡ್
ತುಮಕೂರು:ದೆಹಲಿಯಲ್ಲಿ ಎಐಕೆಎಸ್ಸ್ ನೇತೃತ್ವದಲ್ಲಿ ಜನವರಿ ೨೬ರಂದು ನಡೆಯುವ ರೈತರ ಬೃಹತ್ ಟ್ರಕ್ ಮತ್ತು ಟ್ರಾಕ್ಟರ್ ಫೆರೇಡ್‌ಗೆ ಬೆಂಬಲ ವ್ಯಕ್ತಪಡಿಸಿ, ಬೆಂಗಳೂರಿನಲ್ಲಿ ನಡೆಯುವ ಟ್ರಾಕ್ಟರ್ ಫೆರೇಡ್‌ಗೆ ತುಮಕೂರು ಜಿಲ್ಲೆಯಿಂದ ೫೦೦ ಕ್ಕೂ ಹೆಚ್ಚು ಟ್ರಾಕ್ಟರ್ ಮತ್ತು ಇನ್ನಿತರ ವಾಹನಗಳು ಭಾಗವಹಿಸಲಿವೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ತಿಳಿಸಿದ್ದಾರೆ.
ನಗರದ ರೈತ ಸಂಘದ ಕಚೇರಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರ ಹಳ್ಳಿ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತಿದ್ದ ಅವರು, ಜನವರಿ ೨೬ರ ಮಂಗಳವಾರ ಬೆಳಗ್ಗೆ ತುಮಕೂರು ಜಿಲ್ಲೆಯ ವಿವಿಧ ಭಾಗಗಳಿಂದ ೩೦೦ ಟ್ರಾಕ್ಟರ್,೫೦೦ ಕಾರುಗಳು ಹಾಗೂ ಸಾವಿರಾರು ದ್ವಿಚಕ್ರ ವಾಹನಗಳಲ್ಲಿ ರೈತ ಸಂಘದ ಕಾರ್ಯಕರ್ತರು ಬೆಂಗಳೂರು ನಗರವನ್ನು ತಲುಪಿ, ತುಮಕೂರು ರಸ್ತೆಯ ನೈಸ್ ಜಂಕ್ಷನ್‌ನಲ್ಲಿ ರಾಜ್ಯದ ನಾನಾ ಕಡೆಗಳಿಂದ ಬರುವ ರೈತರ ಟ್ರಾಕ್ಟರ್‌ಗಳೊಂದಿಗೆ ಸ್ವಾತಂತ್ರ್ಯ ಉಧ್ಯಾನವನ ವರೆಗೆ ಟ್ರಾಕ್ಟರ್ ಪೇರಡ್ ನಡೆಸಲಾಗುವುದು.ನಂತರ ರೈತರು, ಕಾರ್ಮಿಕರು, ದಲಿತರು, ಹಿಂದುಳಿದವರ ಸಂಯುಕ್ತ ಐಕ್ಯ ವೇದಿಕೆವತಿಯಿಂದ ಹಮ್ಮಿಕೊಂಡಿರುವ ಹೋರಾಟದಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ,ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿಗೆ ಸಂಬಂಧಿಸಿದ ನಾಲ್ಕು ತಿದ್ದುಪಡಿ ಕಾಯ್ದೆಗಳಿಂದ ಇಡೀ ದೇಶದ ಕೃಷಿ ವಲಯ ನಾಶವಾಗಲಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಕೇಂದ್ರ ಸರಕಾರ ಮೊಂಡುತನ ಬಿಡುತ್ತಿಲ್ಲ. ೧೧ನೇ ಬಾರಿ ರೈತರೊಂದಿಗಿನ ಸಭೆಯೂ ಪರಿಹಾರವಿಲ್ಲದೆ ವಿಫಲವಾಗಿದೆ. ಹಾಗಾಗಿ ರೈತರು ಪ್ರತಿಭಟನೆಯನ್ನು ಮುಂದುವರೆಸಿ,ಜನವರಿ ೨೬ ರಂದು ಟ್ರಾಕ್ಟರ್ ಮತ್ತು ಟ್ರಕ್‌ಗಳ ಫೆರೇಡ್ ಹಮ್ಮಿಕೊಂಡಿದ್ದಾರೆ. ನಾವು ಕೂಡ ಅವರಿಗೆ ಬೆಂಬಲವಾಗಿ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಈ ಹೋರಾಟ ಹಮ್ಮಿಕೊಂಡಿದ್ದೇವೆ.ಇದೊಂದು ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ,ದೇಶಕ್ಕೆ ಅನ್ನದಾತನಾಗಿರುವ ರೈತ ತನ್ನ ಅಸ್ಥಿತ್ವಕ್ಕಾಗಿ ಕಳೆದ ೬೦ ದಿನಗಳಿಂದ ದೆಹಲಿಯ ಗಡಿಯಲ್ಲಿ ಮಳೆ, ಚಳಿಯನ್ನು ಲಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ,೧೫೮ ಜನ ರೈತರು ಹೋರಾಟದ ಸ್ಥಳದಲ್ಲಿಯೇ ಮರಣ ಹೊಂದಿದರೂ, ದೇಶದ ಪ್ರಧಾನಿ ಸೌಜನ್ಯಕ್ಕಾದರೂ ರೈತರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ.ಬದಲಾಗಿ ಉದ್ಯಮಿಗಳು, ಕ್ರಿಕೆಟ್‌ರ್‌ಗಳ ಯೋಗಕ್ಷೇಮ ವಿಚಾರಿಸುವ ಕೆಲಸ ಮಾಡಿ,ಮನ್ ಕಿ ಬಾತ್ ಎಂಬ ಉಪಯೋಗವಿಲ್ಲದ ಹರಟೆಯಲ್ಲಿ ತೊಡಗಿದ್ದಾರೆ. ಪ್ರಧಾನಿಯ ಈ ಧೋರಣೆಯನ್ನು ವಿರೋಧಿಸಿ, ಜನವರಿ ೨೬ ರಂದು ೯೮ ಸಾವಿರ ಟ್ರಾಕ್ಟರ್‌ಗಳು, ೧.೨೫ ಕೋಟಿ ರೈತರು ದೆಹಲಿಯಲ್ಲಿ ಫೆರೇಡ್ ನಡಸಲಿದ್ದಾರೆ ಎಂದರು.
ಕೇಂದ್ರ ಸರಕಾರಕ್ಕೆ ಬೆಂಬಲವಾಗಿ ನಿಂತಿರುವ ರಾಜ್ಯದ ಬಿಜೆಪಿ ಸರಕಾರ ವಿಧಾನಪರಿಷತ್ತಿನಲ್ಲಿ ಮಸೂದೆ ಚರ್ಚೆಯಾಗುವ ಮೊದಲೇ ಸುಗ್ರೀವಾಜ್ಞೆ ಮೂಲಕ ಜಾನುವಾರು ಹತ್ಯೆ ತಡೆ ಮಸೂದೆಯನ್ನು ಜಾರಿಗೆ ತರುವ ಮೂಲಕ ಯಡಿಯೂರಪ್ಪ ಕುರ್ಚಿ ಆಸೆಗೆ ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜನವರಿ ೨೬ ರಂದು ರಾಜ್ಯದಲ್ಲಿ ಈ ಬೃಹತ್ ಟ್ರಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭಕ್ತರಹಳ್ಳಿ ಭೈರೇಗೌಡ ತಿಳಿಸಿದರು.
ಸಭೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರಾದ ತಿಮ್ಮಲಾಪುರ ದೇವರಾಜು,ರುದ್ರೇಶ್‌ಗೌಡ, ಹಳೆ ಸಂಪಿಗೆ ಕೀರ್ತಿ,ಜಗದೀಶ್,ಸಿದ್ದರಾಜು,ರಮೇಶ್,ಅನಿಲ್‌ಕುಮಾರ್,ನಾಗೇಂದ್ರ,ಚಿದಾನಂದ್,ಮಲ್ಲಿಕಾರ್ಜುನಯ್ಯ, ಕುಮಾರಗೌಡ, ಶಂಕರಲಿಂಗೇಗೌಡ, ಶರತ್, ಚಂದ್ರಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.