ರಸ್ತೆಗಾಗಿ ಗ್ರಾಮಸ್ಥರು  ಮನವಿ ಮಾಡಿದರು ರಸ್ತೆ ಮಾಡದ ಗ್ರಾಮ ಪಂಚಾಯ್ತಿ ಅಧಿಕಾರಿಗಳು

ರಸ್ತೆಗಾಗಿ ಗ್ರಾಮಸ್ಥರು  ಮನವಿ ಮಾಡಿದರು ರಸ್ತೆ ಮಾಡದ ಗ್ರಾಮ ಪಂಚಾಯ್ತಿ ಅಧಿಕಾರಿಗಳು

 

 

ತುಮಕೂರು ಮಹಾನಗರದಿಂದ ಕೂಗಳೆತೆ ದೂರದಲ್ಲಿರುವ ಊರುಕೆರೆ ಗ್ರಾಮವು ಇತ್ತೀಚೆಗೆ ಬಹು ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದೆ, ಈ ಗ್ರಾಮಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ನಗರದ ಜನರು ಈ ಭಾಗದಲ್ಲಿ ಸೈಟುಗಳನ್ನು ಕೊಂಡು ಇಲ್ಲೇ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು, ಸೈಟುಗಳ ಬೆಲೆಯೂ ಸಹ ಗಗನಕ್ಕೇರಿದೆ. ಮೊದಲು ಈ ಭಾಗದಲ್ಲಿ ಕೇಳುವವರೇ ಇಲ್ಲದ ಜಾಗಗಳು ಇದೀಗ ಅವುಗಳಿಗೆ ಚಿನ್ನದ ಬೆಲೆ ಬಂದಿದೆ, ಅದಕ್ಕೆ ಕಾರಣ ವಸಂತನರಸಾಪುರ ಕೈಗಾರಿಕಾ ವಲಯ, ಏಕೆಂದರೆ ವಸಂತನರಸಾಪುರ ಮತ್ತು ತುಮಕೂರು ಮಧ್ಯದಲ್ಲಿ ಇರುವ ಈ ಗ್ರಾಮ ಎರಡಕ್ಕೂ ಸಂಪರ್ಕ ಸೇತುವೆಯಾಗಿದೆ.

 

 

 

 

 

 

 

 

 

ಹೀಗಿರುವಲ್ಲಿ ಈ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಮಾತ್ರ ಶೂನ್ಯ ಎಂಬುದು ಇಲ್ಲಿನ ಹೊಸ ನಿವಾಸಿಗಳ ಆಗ್ರಹವಾಗಿದೆ, ಏಕೆಂದರೆ ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಎಲ್ಲಾ ಊರುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿವೆ, ಪ್ರತಿಯೊಂದು ಸಂಪರ್ಕ ಪಡೆಯಲು ಗ್ರಾಮ ಪಂಚಾಯಿತಿಯ ಅನುಮೋದನೆ ಪಡೆದೇ ಮಾಡಬೇಕಾಗಿದೆ, ಜೊತೆಗೆ ಇಂತಿಷ್ಟು ತೆರಿಗೆಯನ್ನು ಸಹ ಕಟ್ಟಿಯೇ ಅವರು ಅಂಕಿತ ನೀಡುತ್ತಿದ್ದಾರೆ, ಜೊತೆಗೆ ನೂತನ ಗ್ರಾಮ ಪಂಚಾಯಿತಿ ಕಾರ್ಯಲಯವು ಸಹ ತುಂಬಾ ಚೆನ್ನಾಗಿದ್ದು, ಸಕಲ ಸೌಕರ್ಯವನ್ನು ಹೊಂದಿದೆ.

 

 

 

 

 

 

 

 

 

ಇನ್ನು ಈ ಗ್ರಾಮ ಪಂಚಾಯಿತಿಯ ಸದಸ್ಯರು, ಅಧ್ಯಕ್ಷರು ಮಾತ್ರ ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿರುವುದು ಮಾತ್ರ ಶೋಚನೀಯ ಸಂಗತಿ, ಏಕೆಂದರೆ ಗ್ರಾಮ ಪಂಚಾಯಿತಿಯ ಎದುರುಗಡೆಯೇ ಅವ್ಯವಸ್ಥೆಯ ಗೂಡಾಗಿದೆ, ಇದರಿಂದ ಊರುಕೆರೆಯ ಹೊಸ ಬಡಾವಣೆಗಳ ನಿವಾಸಿಗಳಿಗೆ ಬೇಸರ ಮೂಡಿಸಿರುವುದಲ್ಲದೇ ಪಂಚಾಯಿತಿಯ ಮೇಲೆ ಅಸಹ್ಯ ಹುಟ್ಟಿಸುವಂತೆ ಮಾಡಿದೆ, ಜೊತೆಗೆ ದಿನನಿತ್ಯ ಪಂಚಾಯಿತಿಗೆ ಶಾಪ ಹಾಕಿಕೊಂಡು, ಒಳಗೊಳಗೆ ಬೈದಾಡಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.

 

 

 

 

 

 

 

 

 

 

 

 

 

ಹೌದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರೇ ಕೆಸರು ಗದ್ದೆಯಂತಾಗಿದೆ, ಈ ಭಾಗದಲ್ಲಿ ಓಡಾಡುವ ಜನರು ಇಲ್ಲಿರುವ ಗುಂಡಿಗಳಿಂದ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಸ್ಥಿತಿ ಬಂದಿದೆ, ಇನ್ನು ಇದೀಗ ಮಳೆಗಾಲ ಶುರುವಾಗಿದೆ, ಈಗಲಂತೂ ಈ ಗುಂಡಿಗಳಲ್ಲಿ ನೀರು ತುಂಬಿರುತ್ತದೆ, ಯಾವ ಗುಂಡಿ ಎಷ್ಟು ಆಳ ಇದೆ ಎಂಬುದೇ ಗೊತ್ತಾಗದ ಹಾಗೆ ಇರುತ್ತದೆ ಇನ್ನು ಎಷ್ಟೋ ಜನ ಈ ಗುಂಡಿಗಳೊಳಗೆ ಬಿದ್ದು ಎದ್ದು ಪಂಚಾಯಿತಿಗೆ ಶಾಪಾ ಹಾಕಿಕೊಂಡು ಓಡಾಡುತ್ತಿದ್ದಾರೆ, ರಾತ್ರಿಯೊತ್ತಂತೂ ಈ ಗುಂಡಿಗಳು ಯಮ ಕಿಂಕರರಂತೆ ಗೋಚರಿಸುತ್ತವೆ, ಏಕೆಂದರೆ ಈ ಭಾಗಗಳಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆಯಾಗಲೀ, ರಸ್ತೆ (ಪಕ್ಕಾ ರಸ್ತೆಯಲ್ಲದೇ ಹೋದರೂ ಕಚ್ಛಾ ರಸ್ತೆಯೂ ಇರುವುದಿಲ್ಲ) ಯಮ ಸ್ವರೂಪಿಯಾದ ಈ ಗುಂಡಿಗಳು ತಮ್ಮ ಬಲಿಗಾಗಿ ಬಾಯಿ ತೆರೆದು ನಿಂತಿರುತ್ತವೆ.

 

 

 

 

 

 

 

 

 

 

 

 

 

ಇನ್ನು ಈ ಪಂಚಾಯಿತಿಗೆ ಹಲವಾರು ಜನ ಸಾರ್ವಜನಿಕರು ರಸ್ತೆ ಮತ್ತು ಮೂಲ ಸೌಕರ್ಯಗಳಿಗಾಗಿ ಮೌಖಿಕವಾಗಿ, ಲಿಖಿತ ರೂಪವಾಗಿ ಸಾಕಷ್ಟು ಭಾರಿ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ, ಜೊತೆಗೆ ಹಾಲಿ ಅಧ್ಯಕ್ಷರು ನೀಲಕಂಠಸ್ವಾಮಿಯವರು ನವ ಉತ್ಸಾಹಿ ಯುವಕ ಎಂದೇ ಬಿಂಬಿತವಾಗಿದ್ದರು (ಈ ಮೊದಲು), ಆದರೆ ಆತ ಅಧ್ಯಕ್ಷನಾದ ಮೇಲೆ ಉತ್ಸಾಹ ಕಡಿಮೆ ಆಯಿತೇನೋ ಗೊತ್ತಿಲ್ಲ, ಏಕೆಂದರೆ ಸ್ವಾಮಿ ಅಧ್ಯಕ್ಷನಾದ ಹೊಸದರಲ್ಲಿ ತಾನು ಈ ಭಾಗವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುತ್ತೇನೆ, ತಾನೊಬ್ಬ ಮಾದರಿ ಅಧ್ಯಕ್ಷನಾಗುತ್ತೇನೆ ಎಂತೆಲ್ಲಾ ಹೇಳಿದ್ದೂ ಸಹ ಉಂಟು ಆದರೆ ಅದೆಲ್ಲ ಪೊಳ್ಳು ಭರವಸೆಯಾಗಿಯೇ ಉಳಿದಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

ಈ ಹಿಂದೆ ಅಂದರೆ ಕಳೆದ ಎರಡು ಮೂರು ವರ್ಷಗಳಿಂದ ಕೆಲವು ಸದಸ್ಯರು ಹೇಳುತ್ತಾ ಬಂದಿದ್ದು ಏನೆಂದರೆ ಊರುಕೆರೆ ಪಂಚಾಯಿತಿಯು ಬಿಜೆಪಿ ಪಕ್ಷದ ಬೆಂಬಲಿತ ಪಂಚಾಯಿತಿಯಾಗಿದೆ, ಗ್ರಾಮಾಂತರ ಶಾಸಕರು ಜೆಡಿಎಸ್ ಪಕ್ಷದವರಾಗಿದ್ದು, ಅವರು ಈ ಭಾಗಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ, ನಾವು ಏನು ಮಾಡೋದು, ಪಂಚಾಯಿತಿಯಲ್ಲಿಯೂ ಸಹ ಹಣವಿಲ್ಲ ಎಲ್ಲಿಂದ ತರೋಣ ಎಂದು ಹೇಳುತ್ತಿದ್ದರು, ಆದರೆ ಇದೀಗ ಬಿಜೆಪಿ ಅಭ್ಯರ್ಥಿಯಾದ ಸುರೇಶ್ ಗೌಡ ಅವರೇ ಗ್ರಾಮಾಂತರ ಶಾಸಕರಾಗಿ ಆಡಳಿತಕ್ಕೆ ಬಂದಿದ್ದಾರೆ ಅವರನ್ನು ಕೇಳಿ ಅನುದಾನ ಹಾಕಿಸಿಕೊಳ್ಳಿ ಎಂದು ಕೇಳಿದರೆ ಏನೇನೋ ಕುಂಟು ನೆಪಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ.

 

 

 

 

 

 

 

 

 

 

 

 

 

 

 

 

ಇನ್ನು ಈ ಕುರಿತು ಹಾಲಿ ಅಧ್ಯಕ್ಷರಾದ ನೀಲಕಂಠ ಸ್ವಾಮಿಯವರು ಏನು ಹೇಳ್ತಾರೆ ಅಂದರೆ ಪಂಚಾಯಿತಿಯಲ್ಲಿ ದುಡ್ಡು ಇಲ್ಲ ನಾವು ಹೇಗೆ ಮಾಡಿಸೋಣ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ, ಒಮ್ಮೆ ಇದೇ ಅಧ್ಯಕ್ಷರು ಮನಸ್ಸು ಮಾಡಿದರೆ ಅವರದೇ ಸ್ವಂತ ಕ್ರಷರ್ ಇದೆ, ಆ ಕ್ರಷರ್‌ನಲ್ಲಿ ಸಂಗ್ರಹವಾಗಿರುವ ವೇಸ್ಟ್ ಆಗಿರುವ ಮಣ್ಣನ್ನು ಇಲ್ಲಿ ತಂದು ಸುರಿಸಿದ್ದರೂ ಸಹ ಈ ಭಾಗದ ಗುಂಡಿಗಳು ಎಂದೋ ಮುಚ್ಚಿ ಹೋಗುತ್ತಿದ್ದವು, ಅವರಿಗೆ ಕೆಲಸ ಮಾಡುವ ಹುಮ್ಮಸ್ಸು ಇಲ್ಲ, ಬರೀ ಅಧಿಕಾರದ ದಾಹ ಎಂಬಂತೆ ಕಾಣುತ್ತಿದೆ.

 

 

 

 

 

 

 

 

 

 

 

 

 

ಎಲ್ಲರಿಗೂ ಅಧಿಕಾರ ಬೇಕೇ ಹೊರತು, ಜನರಿಗೆ ಕೆಲಸ ಮಾಡಿಕೊಡಬೇಕು ಎನ್ನುವ ಹಂಬಲವಿಲ್ಲ, ಜನರ ತೆರಿಗೆ ಹಣವನ್ನು ತಮ್ಮ ಖರ್ಚಿಗೆ ಬೇಕೇ ಹೊರತು, ಜನರಿಗಾಗಿ ಒಳಿತು ಮಾಡಬೇಕು ಎನ್ನುವ ಹುಮ್ಮಸ್ಸು ಇಲ್ಲ, ಜನರ ವೋಟು ಬೇಕೇ ಹೊರತು, ಜನರ ಹಿತಕಾಪಾಡುವ ಮನಸ್ಸು ಇಲ್ಲ. ಇಂತಹ ದುರಾಡಳಿತದಲ್ಲಿ ನಾವುಗಳು ಜೀವನ ಮಾಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version