ಬಂಡೆಗಳು ಉರುಳಿ ಬಿದ್ದು ಹಳಿ ತಪ್ಪಿದ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು
ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲು ತೊಪ್ಪೂರು-ಶಿವಡಿ ವಿಭಾಗದಲ್ಲಿ ಚಲಿಸುತ್ತಿದ್ದಾಗ ಬಂಡೆಗಳು ಉರುಳಿ ಬಿದ್ದ ಕಾರಣ ರೈಲಿನ ಹಲವಾರು ಬೋಗಿಗಳು ಹಳಿ ತಪ್ಪಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬೆಳಗಿನ ಜಾವ 3.50ರ ವೇಳೆಗೆ ಹಳಿ ತಪ್ಪಿದ ಘಟನೆಯಲ್ಲಿ ಯಾವುದೇ ಸಾವು-ನೋವಾಗಿರುವ ಕುರಿತು ವರದಿಯಾಗಿಲ್ಲ. ರೈಲು ಗುರುವಾರ ಸಂಜೆ 6.05ಕ್ಕೆ ಕಣ್ಣೂರಿನಿಂದ ಹೊರಟಿತ್ತು.
ನೈಋತ್ಯ ರೈಲ್ವೆ ಪ್ರಕಾರ, ಹಲವಾರು ಬಂಡೆಗಳು ರೈಲಿನ ಹಳಿ ಮೇಲೆ ಉರುಳಿಬಿದ್ದು ಓಡುತ್ತಿರುವ ರೈಲಿಗೆ ಬಡಿದ ನಂತರ ಹಲವಾರು ಬೋಗಿಗಳು ಹಳಿತಪ್ಪಿದವು.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಅವರು ಹಿರಿಯ ಅಧಿಕಾರಿಗಳು ಮತ್ತು ವೈದ್ಯರ ವಿಭಾಗೀಯ ತಂಡದೊಂದಿಗೆ ಅಪಘಾತ ಪರಿಹಾರ ರೈಲಿನಲ್ಲಿ (ಎಆರ್‌ಟಿ) ಬೆಳಗ್ಗೆ 4:45 ಕ್ಕೆ ಸ್ಥಳಕ್ಕೆ ತಲುಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನ ಈರೋಡ್ ಜಂಕ್ಷನ್‌ನಿಂದ ತಂಡವೊಂದು ಎಆರ್‌ಟಿಯಲ್ಲಿ ಸ್ಥಳಕ್ಕೆ ತೆರಳಿದೆ.
ರೈಲಿನಲ್ಲಿದ್ದ ಎಲ್ಲಾ 2,348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.
ಈ ಮಧ್ಯೆ ಈ ಹಳಿ ಮೇಲಿನ ಕೆಲವೊಂದು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಳಿಗಳ ಮೇಲೆ ಬಿದ್ದಿರುವ ಬಂಡೆಕಲ್ಲುಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟನೆ ತಿಳಿಸಿದೆ.