ಸ್ವಿಸ್ ನಲ್ಲಿ ಭಾರತೀಯರು ಕೂಡಿಟ್ಟ ಸಂಪತ್ತಿನ ಮಾಹಿತಿ ಶೀಘ್ರದಲ್ಲೇ ಬಹಿರಂಗ

ಸ್ವಿಸ್ ನಲ್ಲಿ ಭಾರತೀಯರು ಕೂಡಿಟ್ಟ ಸಂಪತ್ತಿನ ಮಾಹಿತಿ ಶೀಘ್ರದಲ್ಲೇ ಬಹಿರಂಗ

ಹೊಸದಿಲ್ಲಿ: ಸ್ವಿಟ್ಝರ್‌ ಲ್ಯಾಂಡ್‌ ದೇಶದ ಜೊತೆ ಏರ್ಪಡಿಸಿಕೊಂಡ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದಡಿ ಭಾರತವು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ತನ್ನ ಪ್ರಜೆಗಳು ಸ್ವಿಸ್ ಬ್ಯಾಂಕ್ಗಳಲ್ಲಿ ಹೊಂದಿರುವ ಖಾತೆಗಳ ವಿವರಗಳನ್ನು ಪಡೆಯಲಿದೆ. ಇದೇ ಮೊದಲ ಬಾರಿಗೆ ಭಾರತೀಯ ಆ ದೇಶದಲ್ಲಿ ಹೊಂದಿರುವ ರಿಯಲ್ ಎಸ್ಟೇಟ್ ಆಸ್ತಿಗಳ ವಿವರಗಳು ಕೂಡಾ ಬಹಿರಂಗಗೊಳ್ಳಲಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

 

ವಿದೇಶಗಳಲ್ಲಿ ಭಾರತೀಯರು ಕೂಡಿಹಾಕಿರುವ ಕಪ್ಪುಹಣದ ವಿರುದ್ಧ ಭಾರತ ಸರಕಾರದ ಹೂಡಿರುವ ಸಮರದಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ವಿಟ್ಝರ್‌ ಲ್ಯಾಂಡ್‌ ನಲ್ಲಿ ಭಾರತೀಯರ ಒಡೆತನದ ಫ್ಲಾಟ್ಗಳು, ಅಪಾರ್ಟ್ಮೆಂಟ್ಗಳು ಹಾಗೂ ವಸತಿಕಟ್ಟಡಗಳ ಸಂಪೂರ್ಣ ಮಾಹಿತಿ ಕೂಡಾ ಲಭ್ಯವಾಗಲಿದೆ. ಈ ಆಸ್ತಿಗಳಿಂದ ಅವರಿಗೆ ದೊರೆಯುವ ಆದಾಯ ಕೂಡಾ ಬೆಳಕಿಗೆ ಬರಲಿದೆ ಹಾಗೂ ಈ ಆಸ್ತಿಗಳಿಗಾಗಿ ಅವರು ಪಾವತಿಸಬೇಕಾಗಿರುವ ತೆರಿಗೆಗಳ ಬಗ್ಗೆ ಪರಿಶೋಧನೆ ನಡೆಸಲು ಅವಕಾಶ ದೊರೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

ಸ್ವಿಟ್ಝರ್‌ ಲ್ಯಾಂಡ್‌ ನ ಬ್ಯಾಂಕ್ಗಳಲ್ಲಿ ಭಾರತೀಯರ ಖಾತೆಗಳು ಹಾಗೂ ಇತರ ಆರ್ಥಿಕ ಸಂಪತ್ತುಗಳ ಕುರಿತಾಗಿ ಭಾರತದ ಜೊತೆ ಮಾಹಿತಿ ಹಂಚಿಕೊಳ್ಳಲಿರುವುದು ಇದು ಮೂರನೆ ಸಲವಾಗಿದೆ. ಆದರೆ ಸ್ವಿಟ್ಝರ್‌ ಲ್ಯಾಂಡ್‌ ನಲ್ಲಿ ಭಾರತೀಯರು ಹೊಂದಿರುವ ರಿಯಲ್ಎಸ್ಟೇಟ್ ಆಸ್ತಿಗಳ ವಿವರ ಇದೇ ಮೊದಲ ಬಾರಿಗೆ ಬಯಲಾಗಲಿದೆ.

 

ಆದರೆ ಲಾಭೋದ್ದೇಶರಹಿತ ಅಥವಾ ಇತರ ಪ್ರತಿಷ್ಠಾನಗಳಿಗೆ ನೀಡಲಾದ ದೇಣಿಗೆಗಳ ವಿವರಗಳನ್ನು, ಅಥವಾ ಬಿಟ್ಕಾಯಿನ್ನಂತಹ ಡಿಜಿಟಲ್ ಕರೆನ್ಸಿ ಗಳಲ್ಲಿ ಹೂಡಿಕೆಯ ಕುರಿತ ಮಾಹಿತಿಗಳು ‘ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ’ ಕಾರ್ಯವ್ಯಾಪ್ತಿಯಲ್ಲಿಲ್ಲವೆಂದು ಅದು ಹೇಳಿದೆ.

 

ಸ್ವಿಟ್ಝರ್‌ ಲ್ಯಾಂಡ್‌ ನ ಆಸ್ತಿಗಳಲ್ಲಿ ಭಾರತೀಯರ ಹೂಡಿಕೆಯ ಹಣವು ಅಕ್ರಮವಾದುದೆಂಬ ತಪ್ಪುಕಲ್ಪನೆಯನ್ನು ನಿವಾರಿಸಲು ಈ ನಡೆಯು ನೆರವಾಗಲಿದೆಯೆಂದು ತಜ್ಞರು ಹಾಗೂ ಆ ದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸುವ ಉದ್ಯಮದಲ್ಲಿ ತೊಡಗಿರುವವರು ಅಭಿಪ್ರಾಯಿಸುತ್ತಾರೆ.

 

ಕಳೆದ ಎರಡು ವರ್ಷಗಳಲ್ಲಿ ಸ್ವಿಟ್ಝರ್‌ ಲ್ಯಾಂಡ್‌ ತನ್ನ ದೇಶದ ಬ್ಯಾಂಕ್ಗಳಲ್ಲಿ ಗ್ರಾಹಕರು ಇಟ್ಟಿರುವ ಹಣದ ಕುರಿತ ವಿವರಗಳನ್ನು ಹಂಚಿಕೊಳ್ಳುತ್ತಿರುವ ಪ್ರಮುಖ ದೇಶಗಳಲ್ಲಿ ಭಾರತ ಕೂಡಾ ಒಂದಾಗಿದೆ. ಈಗಾಗಲೇ ಸ್ವಿಸ್ ಬ್ಯಾಂಕ್ಗಳಲ್ಲಿ ಸಂಪತ್ತು ಕೂಡಿಹಾಕಿರುವ ನೂರಕ್ಕೂ ಅಧಿಕ ಭಾರತೀಯ ಪೌರರು ಹಾಗೂ ಸಂಸ್ಥೆಗಳ ವಿವರಗಳನ್ನು ಸ್ವಿಸ್ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version